ಅಕ್ರಮ ಗೋವು ಸಾಗಿಸುತ್ತಿದ್ದ ಲಾರಿ ಪಲ್ಟಿ: ನಾಲ್ಕು ಗೋವುಗಳ ಸಾವು

| Published : Oct 22 2025, 01:03 AM IST

ಅಕ್ರಮ ಗೋವು ಸಾಗಿಸುತ್ತಿದ್ದ ಲಾರಿ ಪಲ್ಟಿ: ನಾಲ್ಕು ಗೋವುಗಳ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಲಾರಿಯಲ್ಲಿ 20 ಗೋವುಗಳಿದ್ದು, ಇದರಲ್ಲಿ ನಾಲ್ಕು ಸ್ಥಳದಲ್ಲಿಯೇ ಸಾವನ್ನಪ್ಪಿವೆ.16 ಗೋವುಗಳನ್ನು ಗೋಶಾಲೆಗೆ ಸಾಗಿಸಲಾಗಿದೆ

ಕೊಪ್ಪಳ: ತಾಲೂಕಿನ ಹಿಟ್ನಾಳ ಬಳಿಯ ಹೆದ್ದಾರಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ನಾಲ್ಕು ಗೋವುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಗೊಂಡ ಗೋವುಗಳನ್ನು ಗೋಶಾಲೆಗೆ ಸಾಗಿಸಲಾಗಿದೆ.

ಲಾರಿ ಮಾಲಿಕ ನಾಪತ್ತೆಯಾಗಿದ್ದಾನೆ. ಈ ಕುರಿತು ಕೊಪ್ಪಳ ತಾಲೂಕಿನ ಮುನಿರಾಬಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಗೋವು ಸಂಕ್ಷರಣೆ ಮಾಡಿದ ಸ್ಥಳೀಯರು:

ಲಾರಿಯಲ್ಲಿ 20 ಗೋವುಗಳಿದ್ದು, ಇದರಲ್ಲಿ ನಾಲ್ಕು ಸ್ಥಳದಲ್ಲಿಯೇ ಸಾವನ್ನಪ್ಪಿವೆ.16 ಗೋವುಗಳನ್ನು ಗೋಶಾಲೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳೀಯರಾದ ಪ್ರದೀಪ ಹಿಟ್ನಾಳ, ಸಂಜೀವರಡ್ಡಿ, ಶ್ರೀಕಾಂತ ಹಾಗೂ ಹೊಸಳ್ಳಿ ಗ್ರಾಮಸ್ಥರು ಲಾರಿ ಪಲ್ಟಿಯಾಗಿ ಗೋವುಗಳು ಗೋಳಾಡುತ್ತಿರುವುದನ್ನು ನೋಡಲಾರದೆ ಸ್ವಯಂ ಪ್ರೇರಿತವಾಗಿ ಸಂರಕ್ಷಣೆ ಮಾಡಿದ್ದಾರೆ.

ಲಾರಿಯಲ್ಲಿದ್ದವರೆಲ್ಲರೂ ಪರಾರಿಯಾಗಿದ್ದರಿಂದ ಗಾಯಗೊಂಡ ಗೋವುಗಳ ರಕ್ಷಣೆ ಮಾಡುವವರು ಇರಲಿಲ್ಲ. ಆದರೆ ಸ್ಥಳೀಯರು ಕ್ರೇನ ಬಳಕೆ ಮಾಡಿ ರಸ್ತೆ ಬದಿಗೆ ತಂದಿದ್ದಾರೆ. ಅಷ್ಟೇ ಅಲ್ಲ ಗಾಯಗೊಂಡಿದ್ದ ಗೋವುಗಳಿಗೆ ಸ್ಥಳೀಯವಾಗಿಯೇ ಉಪಚಾರ ಮಾಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಕ್ರೋಶ:ಅಪಘಾತದಲ್ಲಿ ಗಾಯಗೊಂಡ ಗೋವುಗಳನ್ನು ಸಂರಕ್ಷಣೆ ಮಾಡದೆ ಪರಾರಿಯಾಗಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಅಪಘಾತದಿಂದ ಗೊತ್ತಾಗಿದೆ. ಗೋವುಗಳು ನರಳಾಡುತ್ತಿದ್ದರೂ ಸಹ ರಕ್ಷಣೆ ಮಾಡದೆ ಪರಾರಿಯಾಗಿದ್ದರು. ಆದರೆ ಸ್ಥಳೀಯರು ಸೇರಿ ಗೋವುಗಳ ಸಂರಕ್ಷಣೆ ಮಾಡಿದ್ದೇವೆ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಎಂದು ಬಿಜೆಪಿ ಮುಖಂಡ ಪ್ರದೀಪ ಹಿಟ್ನಾಳ ತಿಳಿದ್ದಾರೆ.