ಅಕ್ರಮ ಹರಳು ಕಲ್ಲು ಸಾಗಾಟ: ಕಾಫಿ ತೋಟಕ್ಕೆ ಡಿಎಫ್‌ಒ ಭೇಟಿ

| Published : Jun 13 2024, 12:45 AM IST

ಅಕ್ರಮ ಹರಳು ಕಲ್ಲು ಸಾಗಾಟ: ಕಾಫಿ ತೋಟಕ್ಕೆ ಡಿಎಫ್‌ಒ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದಲ್ಲಿ ಪತ್ತೆಯಾದ ಅಕ್ರಮ ಹರಳು ಕಲ್ಲು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಡಿಕೇರಿ ಸಮೀಪದ ಮೇಕೇರಿ ಬಳಿ ಕಾಫಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಪತ್ತೆಯಾದ ಅಕ್ರಮ ಹರಳು ಕಲ್ಲು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಡಿಕೇರಿ ಸಮೀಪದ ಮೇಕೇರಿ ಬಳಿ ಕಾಫಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ಮುಂಜಾನೆ ಕುಶಾಲನಗರದಲ್ಲಿ ಅರಣ್ಯ ತಪಾಸಣಾ ಕೇಂದ್ರದಲ್ಲಿ ಪತ್ತೆಯಾದ ಹರಳುಕಲ್ಲು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಎರಡು ವಾಹನಗಳು ವಶವಾಗಿವೆ ಮತ್ತು ಸುಮಾರು 2500 ಕೆ.ಜಿ. ಪ್ರಮಾಣದ ಹರಳು ಕಲ್ಲು ವಶಕ್ಕೆ ಪಡೆಯಲಾಗಿದೆ.

ಮಡಿಕೇರಿಯ ಬಳಿ ಮಕೇರಿ ಗ್ರಾಮದ ತೋಟದಲ್ಲಿ ಭಾರಿ ಪ್ರಮಾಣದ ಕಲ್ಲುಗಳು ಪತ್ತೆಯಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ಪ್ರಕರಣ ಹಸ್ತಾಂತರಿಸಲಾಗುತ್ತದೆ ಎಂದು ಡಿಎಫ್‌ಒ ಭಾಸ್ಕರ್ ತಿಳಿಸಿದ್ದಾರೆ.

ವಾಹನ ಸಹಿತ ಮೂವರ ಸೆರೆ:

ಕುಶಾಲನಗರ ಮೂಲಕ ಮೈಸೂರಿನ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹರಳು ಕಲ್ಲು ಸಾಗಾಟ ದಂಧೆಯ ಆರೋಪಿಗಳನ್ನು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕುಶಾಲನಗರ ವಾಹನ ತಪಾಸಣಾ ಗೇಟ್ ಬಳಿ ಪಿಕಪ್ ವಾಹನ ಒಂದರಲ್ಲಿ ಹರಳು ಕಲ್ಲುಗಳನ್ನು ಸಾಗಿಸುತ್ತಿದ್ದ ಸಂದರ್ಭ ಅಲ್ಲಿನ ಸಿಬ್ಬಂದಿ ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಸುಮಾರು 2500 ಕೆ.ಜಿ. ತೂಕದ ಹರಳು ಕಲ್ಲು ವಶಪಡಿಸಿಕೊಂಡಿದ್ದಾರೆ.ಮೂವರು ಆರೋಪಿಗಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಮುಂಜಾನೆ 4 ಗಂಟೆಗೆ ಕುಶಾಲನಗರ ಮೂಲಕ ಮೈಸೂರಿಗೆ ಸಾಗಿಸುತ್ತಿದ್ದ ವೇಳೆ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿದ್ದು ಪಿಕಪ್ ವಾಹನ ಮತ್ತು ಬೆಂಗಾವಲಾಗಿ ಸಂಚರಿಸುತ್ತಿದ್ದ ಆಲ್ಟೊ ಕಾರು ವಶಪಡಿಸಿಕೊಳ್ಳಲಾಗಿದೆ.ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ದೇವಯ್ಯ, ಸಿದ್ದರಾಮಯ್ಯ ನಾಟಿಕಾರ್, ತಳವಾರ್, ಗೇಟ್ ಸಿಬ್ಬಂದಿ ಮೇದಪ್ಪ, ಆರ್‌ಆರ್‌ಟಿ ತಂಡದ ಧರ್ಮರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.