ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಕೆಳದಿ ಗ್ರಾಮದ ಸ.ನಂ.೮೨ರಲ್ಲಿನ ಎಂಪಿಎಂ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿ, ಮರಗಿಡ ನಾಶಪಡಿಸುತ್ತಿರುವ ಮಹ್ಮದ್ ಹುಸೇನ್ ಬಿನ್ ದೊಡ್ಮನೆ ಖಾನ್ ಸಾಬ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕೆಳದಿ ಹಳ್ಳಿಬೈಲು ಗ್ರಾಮಸ್ಥರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ವೇಳೆ ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ.ಕೆಳದಿ ಮಾತನಾಡಿ, ಹಳ್ಳಿಬೈಲು ಗ್ರಾಮದಲ್ಲಿ ಕಂದಾಯ ಇಲಾಖೆ ೧.೨೦ಎಕರೆ ಜಾಗವನ್ನು ಅಕ್ರಮವಾಗಿ ಮಹ್ಮದ್ ಹುಸೇನ್ ಅವರಿಗೆ ಮಂಜೂರು ಮಾಡಿ ಕೊಟ್ಟಿತ್ತು. ಕೆಳದಿ ಮತ್ತು ಹಳ್ಳಿಬೈಲು ಗ್ರಾಮಸ್ಥರು ನಿರಂತರ ಹೋರಾಟ ಮಾಡಿ ಉಪವಿಭಾಗಾಧಿಕಾರಿ ಮೂಲಕ ಖಾತೆ ರದ್ದುಪಡಿಸಲಾಗಿದೆ. ರದ್ದುಮಾಡುವ ತನಕ ಸದರಿ ಜಾಗದಲ್ಲಿ ಯಾವುದೇ ಸಾಗುವಳಿ ಇರಲಿಲ್ಲ. ಖಾತೆ ರದ್ದು ಮಾಡಿದ ನಂತರ ಈ ಜಾಗದಲ್ಲಿರುವ ಅಕೇಶಿಯಾ, ಕಾಡುಜಾತಿ ಜೀವಂತ ಮರಗಳನ್ನು ಬೆಂಕಿ ಹಾಕಿ ಸುಡಲಾಗುತ್ತಿದೆ ಎಂದು ದೂರಿದರು. ಪರಿಸರ ನಾಶ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದ್ದಾಗ್ಯೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಪಿಎಂ ಕಾವಲುಗಾರನಿಗೆ ಜೀವ ಬೆದರಿಕೆ ಹಾಕಲಾಗಿದೆ. ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದಾಗ ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ತಕ್ಷಣ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಅಕ್ರಮವಾಗಿ ಸಾಗುವಳಿ ಮಾಡಿರುವ ಹಾಗೂ ಅರಣ್ಯ ನಾಶ ಮಾಡಿರುವವರ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕೆಳದಿ ಭೂತೇಶ್ವರ ಗ್ರಾಮ ಸಮಿತಿ ಅಧ್ಯಕ್ಷ ದೇವಪ್ಪ ಕೆಳದಿ ಮಾತನಾಡಿ, ಸ.ನಂ.೮೨ರಲ್ಲಿ ಅಕ್ರಮವಾಗಿ ಅರಣ್ಯ ನಾಶ ನಡೆಯುತ್ತಿರುವ ಮಾಹಿತಿ ನೀಡಿದ್ದಾಗ್ಯೂ ಅರಣ್ಯ ಇಲಾಖೆ ಮೌನವಾಗಿರುವುದು. ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಬಗ್ಗೆ ಮಾಹಿತಿ ಹೊಂದಿರುವ ಕಂದಾಯ ಇಲಾಖೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗ್ರಾಮಸ್ಥರು ಸರ್ಕಾರಿ ಭೂಮಿ, ಅರಣ್ಯ ಉಳಿಸಿಕೊಳ್ಳಲು ತೋರಿಸಿದಷ್ಟು ಆಸಕ್ತಿಯನ್ನು ಇಲಾಖೆ ಅಧಿಕಾರಿಗಳು ತೋರಿಸುತ್ತಿಲ್ಲ. ತಕ್ಷಣ ಮಹ್ಮದ್ ಹುಸೇನ್ ಅವರ ಮೇಲೆ ಕಾನೂನುಕ್ರಮ ಜರುಗಿಸದೆ ಹೋದಲ್ಲಿ ಗ್ರಾಮಸ್ಥರು ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಎಫ್ಐಆರ್ ದಾಖಲು ಭರವಸೆ:ಮನವಿ ಸ್ವೀಕರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಕೇಶಿಯಾ ಮತ್ತು ಕಾಡುಜಾತಿ ಮರಗಳನ್ನು ನಾಶ ಮಾಡಿರುವ ಮಹ್ಮದ್ ಹುಸೇನ್ ಬಿನ್ ದೊಡ್ಮನೆ ಖಾನ್ ಸಾಬ್ ವಿರುದ್ಧ ಎಫ್ಐಆರ್ ದಾಖಲು ಮಾಡುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಮಹೇಶ್ ಕೆ.ಆರ್., ಕೆ.ಬಿ.ಮಂಜಪ್ಪ, ವೆಂಕಟೇಶ್, ಲಕ್ಷ್ಮಣ, ಮಂಜಪ್ಪ, ರಾಮಚಂದ್ರ, ಕೃಷ್ಣಪ್ಪ, ಕೆರೆಯಪ್ಪ ಇನ್ನಿತರರು ಹಾಜರಿದ್ದರು.