ಶಿಗ್ಗಾಂವಿ ತಾಲೂಕಿನ ದುಂಡಶಿ ವಲಯದ ಹೊಸೂರ ಗ್ರಾಮದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದೆ.
ಶಿಗ್ಗಾಂವಿ: ತಾಲೂಕಿನ ದುಂಡಶಿ ವಲಯದ ಹೊಸೂರ ಗ್ರಾಮದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆಹಚ್ಚಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದೆ.
ಖಚಿತ ಮಾಹಿತಿಯ ಮೇರೆಗೆ ದುಂಡಶಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಹೊಸೂರ ಗ್ರಾಮದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಅಕ್ರಮವಾಗಿ ಕಡಿದಿದ್ದ ಸಾಗುವಾನಿ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.ಕಾರ್ಯಾಚರಣೆಯಲ್ಲಿ 7 ಸಾಗುವಾನಿ ಬೊಲೆಗಳು ಒಟ್ಟು 4.441 ಘನ ಮೀಟರ್, 4 ಸಾಗುವಾನಿ ಗೋಲ ತುಂಡುಗಳು 0.146 ಘನ ಮೀಟರ್ ಹಾಗೂ 22 ಮಿಶ್ರ ಗೋಲ ತುಂಡುಗಳು 0.668 ಘನ ಮೀಟರ್ ಸೇರಿದಂತೆ ಒಟ್ಟು ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಎರಡು ಕೊಡಲಿಗಳು ಹಾಗೂ ಹೀರೋ ಸ್ಪೆಂಡ್ಲರ್ ಪ್ಲಸ್ ದ್ವಿಚಕ್ರ ವಾಹನವನ್ನು ಸಹ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ-1963ರ ಕಲಂ 24(ಇ), 62(1) ಹಾಗೂ 71(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ಮರ ಹಾಗೂ ವಾಹನ ಸೇರಿದಂತೆ ಇತರೆ ವಸ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಇಲಾಖೆಯ ವಶದಲ್ಲಿ ಇರಿಸಲಾಗಿದೆ.ಅಕ್ರಮವಾಗಿ ಅರಣ್ಯ ಸಂಪತ್ತು ಕಡಿತ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ. ಕಾರ್ಯಾಚರಣೆಯಲ್ಲಿ ಪ್ರಕಾಶ್ಕರ್ ಅಕ್ಷಯ ಅಶೋಕ, ಎಸ್.ಜಿ. ಪೂಜಾರ, ರಮೇಶ ಶೇತಸನದಿ, ಗದಿಗೆಪ್ಪಗೌಡ ಕಳಕನಗೌಡ್ರ, ಶಂಭುಲಿಂಗ ಗಡ್ಡದ, ರವೀಂದ್ರ ಕಾರ್ಜೋಳ, ಬಸಪ್ಪ ವಣ್ಣೂರ, ಬಸವರಾಜ ನಿಕ್ಕಂ, ಗಂಗು ಗೌಳಿ, ಅಲ್ಲಾಭಕ್ಷ ಬುಡ್ನಾನವರ ಸೇರಿದಂತೆ ಉಳಿದ ಸಿಬ್ಬಂದಿ ಭಾಗವಹಿಸಿದ್ದರು.