ಗದಗ-ಧಾರವಾಡ ಗಡಿ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಡೀಸೆಲ್ ದಂಧೆ ಕುರಿತು ‘ಕನ್ನಡಪ್ರಭ’ ಗುರುವಾರ ವಿಸ್ಕೃತ ವರದಿ ಪ್ರಕಟಿಸಿದ ಬೆನ್ನಲ್ಲೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಗಡಿ ಭಾಗದ ಹಲವು ಗ್ರಾಮಗಳಿಗೆ ಬೀಟ್ ಪೊಲೀಸರು ಭೇಟಿ ನೀಡುತ್ತಿದ್ದಾರೆ.
ಹುಬ್ಬಳ್ಳಿ:
ಗದಗ-ಧಾರವಾಡ ಗಡಿ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಡೀಸೆಲ್ ದಂಧೆ ಕುರಿತು ‘ಕನ್ನಡಪ್ರಭ’ ಗುರುವಾರ ವಿಸ್ಕೃತ ವರದಿ ಪ್ರಕಟಿಸಿದ ಬೆನ್ನಲ್ಲೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಗಡಿ ಭಾಗದ ಹಲವು ಗ್ರಾಮಗಳಿಗೆ ಬೀಟ್ ಪೊಲೀಸರು ಭೇಟಿ ನೀಡಿ, ಅನುಮಾನಾಸ್ಪದ ಡೀಸೆಲ್ ಟ್ಯಾಂಕರ್‌ಗಳ ಸಂಚಾರ, ಮಾರಾಟದ ಸ್ಥಳ ಹಾಗೂ ದಂಧೆಯಲ್ಲಿ ತೊಡಗಿರುವವರ ಕುರಿತು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.ಪೆಟ್ರೋಲ್ ಬಂಕ್‌ಗೆ ತೆರಳಿ ಡೀಸೆಲ್ ಖರೀದಿಸುವ ಬದಲು, ಟ್ಯಾಂಕರ್‌ಗಳೇ ಹಳ್ಳಿ-ಹಳ್ಳಿಗೆ ತೆರಳಿ ಮನೆ ಬಾಗಿಲಿಗೇ ಡೀಸೆಲ್ ಮಾರಾಟ ಮಾಡಲಾಗುತ್ತಿತ್ತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗಡಿಭಾಗದ ಯಲವತ್ತಿ, ಯತ್ನಳ್ಳಿ, ಮಾಡೊಳ್ಳಿ, ಎತ್ತನಹಳ್ಳಿ, ಮಾಗಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅವ್ಯಾಹತವಾಗಿ ದಂಧೆ ನಡೆಯುತ್ತಿರುವ ಕುರಿತು ಕನ್ನಡಪ್ರಭ ವರದಿ ಪ್ರಕಟಿಸುತ್ತಿದ್ದಂತೆ ಪೊಲೀಸರು ಗಡಿ ಗ್ರಾಮಗಳಲ್ಲಿ ಬೀಟ್ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದಾರೆ. ಜತೆಗೆ ಟ್ಯಾಂಕರ್‌ಗಳ ಚಲನವಲನದ ಮೇಲೆ ನಿಗಾ ಇರಿಸಿದ್ದು ಗ್ರಾಮಸ್ಥರನ್ನು ವಿಚಾರಿಸಿ ಅಕ್ರಮ ಡೀಸೆಲ್ ಮಾರಾಟದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ನಾಲ್ಕು ತಾಲೂಕುಗಳಿಗೆ ಜಾಲ?ಪೊಲೀಸರ ಪ್ರಾಥಮಿಕ ಮಾಹಿತಿ ಸಂಗ್ರಹದಲ್ಲಿ ಗದಗ-ಧಾರವಾಡ ಜಿಲ್ಲೆಗಳ ವ್ಯಾಪ್ತಿಯ ನಾಲ್ಕು ತಾಲೂಕುಗಳಿಗೆ ಅಕ್ರಮ ಡೀಸೆಲ್ ದಂಧೆಯ ಜಾಲ ಹಬ್ಬಿರುವ ಸುಳಿವು ದೊರೆತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳ ವ್ಯಾಪ್ತಿಯಲ್ಲೂ ದಂಧೆ ವಿಸ್ತರಿಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅಕ್ರಮವಾಗಿ ಸಂಚರಿಸುವ ಟ್ಯಾಂಕರ್‌ಗಳ ಕುರಿತು ಮಾಹಿತಿ ನೀಡಲು ಕೆಲ ಗ್ರಾಮಸ್ಥರು ಹಿಂದೇಟು ಹಾಕುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ದಂಧೆಯಲ್ಲಿ ಬಳಕೆಯಾಗುತ್ತಿರುವ ಟ್ಯಾಂಕರ್ ಮಾಲೀಕನೊಬ್ಬ ಮುಂಡರಗಿ ತಾಲೂಕಿನ ಗ್ರಾಮದ ನಿವಾಸಿ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದ್ದು, ಆತನ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.ಕಾರ್ಯಾಚರಣೆ ಚುರುಕು:
ಗುರುವಾರ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಕಪ್ಪತ್ತಮಲ್ಲಯ್ಯ ಜಾತ್ರಾ ಮಹೋತ್ಸವ ನಡೆದ ಹಿನ್ನೆಲೆಯಲ್ಲಿ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಜಾತ್ರಾ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಇದರಿಂದ ಗಡಿ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದ್ದು ಶುಕ್ರವಾರ ಅಥವಾ ಶನಿವಾರದಿಂದ ಅಕ್ರಮ ಡೀಸೆಲ್ ದಂಧೆಯ ಕುರಿತು ಪರಿಶೀಲನೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಅಕ್ರಮ ಮಾರಾಟದ ಮೂಲ ಪತ್ತೆ ಹಚ್ಚಿ, ಟ್ಯಾಂಕರ್‌ಗಳ ದಾಖಲೆ ಹಾಗೂ ಡೀಸೆಲ್ ಪೂರೈಕೆಯ ಕುರಿತು ಪರಿಶೀಲನೆ ನಡೆಸಲು ಇಲಾಖೆ ಮುಂದಾಗಿದೆ.ಕಡಿಮೆ ಬೆಲೆಗೆ ಡೀಸೆಲ್ ಸಿಗುತ್ತದೆ ಎಂದು ನಾವು ಖರೀದಿಸುತ್ತಿದ್ದೇವು. ಆದರೆ, ಗುರುವಾರ ಪೊಲೀಸರು ಬಂದು ಗ್ರಾಮದಲ್ಲಿ ಅಕ್ರಮವಾಗಿ ಡೀಸೆಲ್ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಕೇಳಿದರು. ಇನ್ನೊಮ್ಮೆ ಟ್ಯಾಂಕರ್ ಗ್ರಾಮಕ್ಕೆ ಬಂದರೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.ಸಾರ್ವಜನಿಕರು