ಹಿರೇಹಡಗಲಿ ಕೆರೆ ನೀರನ್ನು ಪಕ್ಕದ ತುಂಬಿನಕೆರೆಯ ಕೆಲ ರೈತರು ಅಕ್ರಮವಾಗಿ ಮೋಟಾರ್‌ ಮೂಲಕ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ

ಹೂವಿನಹಡಗಲಿ: ಬರದಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರು ಆಸರೆಯಾಗಲೆಂದು ಕೆರೆ ತುಂಬಿಸುವ ಯೋಜನೆಯಿಂದ ಕೆರೆಗಳಿಗೆ ನೀರು ಪೂರೈಕೆ ಮಾಡಲಾಗಿತ್ತು. ಕೆರೆಯಲ್ಲಿ ಸಂಗ್ರಹಿಸಿದ ನೀರನ್ನು ಅಕ್ಕಪಕ್ಕದವರು ಅಕ್ರಮವಾಗಿ ಮೋಟಾರ್‌ ಬಳಸಿ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ.

ಹಿರೇಹಡಗಲಿ ಗ್ರಾಮದ ಕೆರೆಯ ನೀರು ಮೇವು ನೀರು ಅರಿಸಿ ಬಂದ ಗೋವು, ಕುರಿ ಮೇಕೆಗಳಿಗೆ ಹಾಗೂ ಸ್ಥಳೀಯ ಜಾನುವಾರುಗಳಿಗೆ ಆಸರೆಯಾಗಿದೆ. ಕೆರೆಯ ನೀರನ್ನು ಅಕ್ರಮವಾಗಿ ಮೋಟಾರ್‌ ಬಳಿಸಿ ನೀರೆತ್ತುವುದು ಅಪರಾಧವಾಗಿದೆ. ರೈತರು ಮೋಟಾರ್‌ ಪಂಪ್‌ಸೆಟ್‌ಗಳಿಗೆ ಅಕ್ರಮವಾಗಿ ವಿದ್ಯುತ್‌ ಕೂಡಾ ಸಂಪರ್ಕ ಪಡೆದಿದ್ದಾರೆ.

ಈ ಕುರಿತು ಸಂಬಂಧ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಇವರ ನಿರ್ಲಕ್ಷ್ಯ ಮುಂದುವರೆದರೇ ಕೆರೆಯ ನೀರು ಖಾಲಿಯಾಗಿ ನೀರಿಗೆ ಪರಿತಪ್ಪಿಸುವ ಪರಿಸ್ಥಿತಿ ಬರಲಿದೆ. ಮಾಗಳ ಬಳಿ ಇರುವ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಹಿರೇಹಡಗಲಿ ಕೆರೆಯ ಪೈಪ್‌ಲೈನ್‌ ಏರ್‌ವಾಲ್‌ಗಳಿಗೆ ಅಕ್ರಮವಾಗಿ ಪೈಪ್‌ಲೈನ್‌ ಮಾಡಿಕೊಂಡು ಬರದಲ್ಲಿಯೂ ಕರೇಕಡ್ಲಿ ಸೇರಿದಂತೆ ಇತರೆ ಬೆಳೆಗಳಿಗೆ ಅಕ್ರಮವಾಗಿ ನೀರು ಹರಿಸುತ್ತಿದ್ದಾರೆ. ಈ ಕುರಿತು ಯೋಜನೆ ಅಧಿಕಾರಿಗಳು ರೈತರಿಗೆ ತಿಳಿವಳಿಕೆ ನೀಡಿದ್ದರೂ ಅಕ್ರಮವಾಗಿ ನೀರು ಬಳಕೆ ಮಾತ್ರ ತಪ್ಪಿಲ್ಲ, ಈ ರೀತಿ ನೀರಿನ ಸೋರಿಕೆಯಿಂದ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳುತ್ತಿಲ್ಲ.ಕೆಲ ಪ್ರಭಾವಿಗಳು ಅಧಿಕಾರಿಗಳ ಮಾತಿಗೂ ಜಗ್ಗದೇ ತಮ್ಮದೇ ದಾಟಿಯಲ್ಲಿ ಅಧಿಕಾರಿಗಳ ವಿರುದ್ಧ ಮಾತನಾಡುತ್ತಾ ನೂರಾರು ಎಕ್ರೆ ಪ್ರದೇಶಕ್ಕೆ ಅಕ್ರಮವಾಗಿ ನೀರುಣಿಸುತ್ತಿದ್ದಾರೆ.

ಹಿರೇಹಡಗಲಿ ಕೆರೆ ನೀರನ್ನು ಪಕ್ಕದ ತುಂಬಿನಕೆರೆಯ ಕೆಲ ರೈತರು ಅಕ್ರಮವಾಗಿ ಮೋಟಾರ್‌ ಮೂಲಕ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ, ಇದರಿಂದ ಕೆರೆಯ ನೀರು ದಿನದಿಂದ ದಿನಕ್ಕೆ ಕುಸಿತ ಕಂಡಿದೆ. ಕೆರೆ ಬತ್ತುವ ಕಾಲ ಸನಿಹಕ್ಕೆ ಬಂದಿದೆ.

ಹಿರೇಹಡಗಲಿ ಕೆರೆಯಲ್ಲಿನ ನೀರಿನ ಪ್ರಮಾಣ ಕುಸಿತ ಕಂಡಿರುವ ಹಿನ್ನೆಲೆ ನೀರು ಪೊರೈಕೆ ಮಾಡಲಾಗುತ್ತಿತ್ತು, ಆದರೆ ಕೆಲ ರೈತರು ಪೈಪ್‌ಲೈನ್‌ ಏರ್‌ವಾಲ್‌ನಿಂದ ರೈತರು ಅಕ್ರಮವಾಗಿ ನೀರನ್ನು ಬೆಳೆಗಳಿಗೆ ಬಿಡುತ್ತಿದ್ದಾರೆ, ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇಇ ಎಚ್‌.ಸಿ. ರಾಘವೇಂದ್ರ ಹೇಳಿದರು.

ಹಿರೇಹಡಗಲಿ ಕೆರೆಯಲ್ಲಿನ ನೀರನ್ನು ಅಕ್ರಮವಾಗಿ ಮೋಟಾರ್‌ ಬಳಸಿ ನೀರೆತ್ತಲು ವಿದ್ಯುತ್‌ ಅಕ್ರಮ ಸಂಪರ್ಕ ಪಡೆದಿರುವ ಕುರಿತು ಸ್ಥಳ ಪರಿಶೀಲನೆ ಮಾಡಿ ಅಂತಹ ದಂಧೆ ಕಂಡು ಬಂದರೇ ವಿದ್ಯುತ್‌ ಸಂಪರ್ಕ ಕಡಿತ ಮಾಡುತ್ತೇವೆ ಎಂದು ಜೆಸ್ಕಾಂ ಎಇಇ ಕೆ.ನಾಗರಾಜ ಹೇಳಿದರು.