ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಎಸ್‌ಟಿ ತೆರಿಗೆ ವಂಚನೆ ಮಾಡಿ ಅಕ್ರಮ ಅಡಿಕೆ ವಹಿವಾಟು ನಡೆಯುತ್ತಿದೆ ಎಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮಾರ್ದನಿಸುತ್ತಿದ್ದ ಗಂಭೀರ ಆರೋಪಗಳಿಗೆ ಇದೀಗ ರೆಕ್ಕೆ ಪುಕ್ಕ ಬಂದಿದ್ದು ಪೊಲೀಸ್ ಠಾಣೆ ಮೆಟ್ಟಿಲು ಏರುವುದರ ಮೂಲಕ ಹೊಸ ತಿರುವು ಪಡೆದುಕೊಂಡಿದೆ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಅಡಕೆ ಲಾರಿಗಳ ತಡೆದು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ದೂರೊಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಸಲ್ಲಿಕೆಯಾಗಿದ್ದು ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಏತನ್ಮಧ್ಯೆ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಎಂಟ್ರಿ ಕೊಡುವುದರ ಮೂಲಕ ಅಡಿಕೆ ವಹಿವಾಟಿನ ಪ್ರಕರಣಕ್ಕೆ ಮತ್ತಷ್ಟು ತಿರುವು ಸಿಕ್ಕಿದೆ.
ಭದ್ರಾವತಿ ತಾಲೂಕಿನ ಅಡಿಕೆ ಟ್ರೇಡರ್ಸ್ ಮಂಜುನಾಥ್ ಎಂಬುವಾತ ಲಾರಿಗೆ ಅಡಿಕೆ ತುಂಬಿ ದೆಹಲಿಗೆ ಕಳಿಸುತ್ತಿದ್ದು ಚಿತ್ರದುರ್ಗದ ಹೊರವಲಯದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಲಾರಿ ತಡೆದು ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದಾರೆ. ಸಾಲದೆಂಬಂತೆ ಚಾಲಕನ ಮೇಲೂ ಹಲ್ಲೆ ಮಾಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವಂತೆಯೂ ಒತ್ತಾಯಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ನಮ್ಮ ಜಿಲ್ಲೆಯ ರೈತರಿಗೆ ಅಡಿಕೆ ಬೆಲೆಯಲ್ಲಿ ವಂಚನೆ ಆಗುತ್ತಿದೆ. ಇಂಡೋನೇಷ್ಯಾ, ಬರ್ಮಾ ಸೇರಿ ಅನ್ಯದೇಶಗಳಿಂದ ಕಡಿಮೆ ಬೆಲೆ ಅಡಿಕೆ ಬರುತ್ತಿದ್ದು ಕಡಿಮೆ ದರಕ್ಕೆ ಕೊಂಡು ಅದಕ್ಕೆ ಬಣ್ಣ ಹಾಕಿ ಮಾರುವ ಜಾಲ ಇದೆ. ಅಡಿಕೆಗೆ ಕಡಿಮೆ ದರ ನಿಗಧಿ ಮಾಡಿ ಜಿಎಸ್ ಟಿ ವಂಚಿಸಲಾಗುತ್ತಿದೆ. ಈ ಸಂಬಂಧ ದಂಧೆ ಬಯಲು ಮಾಡಲು ಜಿಎಸ್ ಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಹಣಕ್ಕಾಗಿ ಯಾವುದೇ ಡಿಮ್ಯಾಂಡ್ ಮಾಡಿಲ್ಲ, ಇದೆಲ್ಲಾ ಶುದ್ದ ಸುಳ್ಳು ಎಂದು ನಿರಾಕರಿಸಿದ್ದಾರೆ.