ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಬೇರೆಯವರಿಗೆ ಪರಭಾರೆ ಮಾಡಿದ್ದ ಇಂಡಿ ತಾಲೂಕಿನ ಹಂಜಗಿ ಪಿಡಿಒ ಹಾಗೂ ನಿಯಮ ಪಾಲಿಸದೇ ಅದನ್ನು ಖರೀದಿ ಹಾಕಿ ಕೊಟ್ಟಿದ್ದ ಉಪನೋಂದಣಾಧಿಕಾರಿ ಪ್ರಕರಣದಲ್ಲಿ ಶಾಮೀಲಾಗಿರುವ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ. ಈ ಕುರಿತು ಕನ್ನಡಪ್ರಭ ಜೂ.12ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಆಧಾರದ ಮೇಲೆ ಇದೀಗ ಇಂಡಿ ಉಪನೋಂದಣಾಧಿಕಾರಿ ಮೇಲೆ ಕ್ರಮಕ್ಕೆ ಸರ್ಕಾರ ಮುಂದಾಗಿದೆ.ಕನ್ನಡಪ್ರಭ ವರದಿಗೆ ಡಿಸಿ ಸ್ಪಂದನೆ:ಉಪನೋಂದಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಆಸ್ತಿ ಪಂಚಾಯತಿ ಕಾರ್ಯದರ್ಶಿ ಹಾಗೂ ತಾಪಂ ಇಒ ಅವರ ಹೆಸರಿನಲ್ಲಿದ್ದರೂ ಉಪನೋಂದಣಾಧಿಕಾರಿಗಳು ಕೇವಲ ಪಿಡಿಒ ಸಹಿ ಒಂದರ ಮೇಲೆಯೇ ಆಸ್ತಿಯನ್ನು ವರ್ಗಾಯಿಸಿ ಕೊಟ್ಟಿದ್ದರು. ಪ್ರಾಥಮಿಕ ಹಂತದಲ್ಲಿ ಪಿಡಿಒ ರವೀಂದ್ರ ಕರಜಗಿಯನ್ನು ಅಮಾನತು ಮಾಡಲಾಗಿತ್ತು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದ ಉಪನೋಂದಣಾಧಿಕಾರಿ ಹಾಗೂ ಕಚೇರಿಯ ಸಿಬ್ಬಂದಿಗಳ ಮೇಲೂ ಕ್ರಮ ಆಗಬೇಕು ಎಂದು ಕನ್ನಡಪ್ರಭ ವರದಿಯಲ್ಲಿ ಒತ್ತಾಯಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ವರದಿ ಸಲ್ಲಿಕೆ:ಇಂಡಿ ತಾಲೂಕಿನ ಹಂಜಗಿ ಗ್ರಾಮದ ಸರ್ಕಾರಿ ಜಮೀನು ರಿ.ಸ.ನಂ.531/1 ಕ್ಷೇತ್ರದ ಪೈಕಿ 3-20 ಎಕರೆ ಜಮೀನು ನಿಯಮ ಬಾಹಿರವಾಗಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಇಂಡಿ ಉಪ ನೋಂದಣಾಧಿಕಾರಗಳ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಇಂಡಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಹಂಜಗಿ ಗ್ರಾಪಂ ಕಾರ್ಯದರ್ಶಿ ಇವರ ಹೆಸರಿನಲ್ಲಿರುವ ಸರ್ಕಾರಿ ಜಮೀನನ್ನು ತಾಲೂಕು ಪಂಚಾಯತಿ ಕಾರ್ಯನಿರ್ವಾಹ ಅಧಿಕಾರಿಗಳ ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ನೀಡದೇ ಇದ್ದಾಗಿಯೂ ಕೇವಲ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕರಜಗಿ ಇವರೊಬ್ಬರ ಪತ್ರ ಮತ್ತು ಸಹಿ ಮೇಲೆ ಪರಭಾರೆ ಮಾಡಿದ್ದು, ಕೇವಲ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೃಢೀಕರಣ ಮೇಲೆ ಆಸ್ತಿ ಪರಭಾರೆ ಮಾಡಿರುವುದು ಇಂಡಿಯ ಉಪನೋಂದಣಾಧಿಕಾರಿ ರವೀಂದ್ರನಾಥ ಹಂಚಿನಾಳ ಅವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಆಸ್ತಿಯನ್ನು ನಿಯಮ ಉಲ್ಲಂಘಿಸಿ ಖಾಸಗಿ ವ್ಯಕ್ತಿ ಹೆಸರಿಗೆ ಹಸ್ತಾಂತರಿಸಿದ್ದು ಕಂಡು ಬಂದಿದೆ.ಈ ಕುರಿತು ಇಂಡಿ ಉಪವಿಭಾಗಾಧಿಕಾರಿಗಳು, ಉಪನೊಂದಣಾಧಿಕಾರಿಗಳಿಗೆ ಏಪ್ರಿಲ್ 29ರಂದು ಪತ್ರ ಬರೆದು ವರದಿ ಸಲ್ಲಿಸಲು ಸೂಚಿಸಿದ್ದರು. ಆ ಪತ್ರಕ್ಕೆ ಉಪನೋಂದಣಾಧಿಕಾರಿ ಈವರೆಗೆ ಯಾವುದೇ ಉತ್ತರ ನೀಡಿರುವುದಿಲ್ಲ. ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಜೂನ್ 7ರಂದು ಕಾರಣ ಕೇಳುವ ನೋಟಿಸ್ ಜಾರಿ ಮಾಡಿ ಲಿಖಿತ ಉತ್ತರ ಮತ್ತು ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಕಚೇರಿಗೆ ಖುದ್ದಾಗಿ ಹಾಜರಾಗಿ ವರದಿ ಸಲ್ಲಿಸಲು ತಿಳಿಸಲಾಗಿತ್ತಾದರೂ ಯಾವುದಕ್ಕೂ ಸ್ಪಂದಿಸದೇ ಸರಕಾರಿ ಕೆಲಸದಲ್ಲಿ ನಿಷ್ಕಾಳಜಿತನ ತೋರುತ್ತಿರುವುದರಿಂದ ಇಂಡಿ ಉಪನೋಂದಣಾಧಿಕಾರಿ ರವೀಂದ್ರನಾಥ ಹಂಚಿನಾಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ.