ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಂಚಿನಲ್ಲಿ ರೆಸಾರ್ಟ್‌, ಹೋಂ ಸ್ಟೇಗಳಿಗೆ ನಿರ್ಬಂಧ ಹೆಚ್ಚಾದ ಕಾರಣ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಇದೀಗ ಕೃಷಿ ಜಮೀನನ್ನೇ ತುಂಡು ಭೂಮಿಯಾಗಿ ಪರಿವರ್ತಿಸಿ ಫಾರ್ಮ್‌ ಫ್ಲಾಟ್‌ ಹೆಸರಲ್ಲಿ ಮಿನಿ ಟೌನ್‌ಶಿಪ್‌ ಮಾದರಿಗೆ ಮುಂದಾಗಿದ್ದಾರೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಂಚಿನಲ್ಲಿ ರೆಸಾರ್ಟ್‌, ಹೋಂ ಸ್ಟೇಗಳಿಗೆ ನಿರ್ಬಂಧ ಹೆಚ್ಚಾದ ಕಾರಣ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಇದೀಗ ಕೃಷಿ ಜಮೀನನ್ನೇ ತುಂಡು ಭೂಮಿಯಾಗಿ ಪರಿವರ್ತಿಸಿ ಫಾರ್ಮ್‌ ಫ್ಲಾಟ್‌ ಹೆಸರಲ್ಲಿ ಮಿನಿ ಟೌನ್‌ಶಿಪ್‌ ಮಾದರಿಗೆ ಮುಂದಾಗಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಬಡಾವಣೆ ಮಾದರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಸರ್ವೇ ಸಂಖ್ಯೆ.೨೧, ೪೧, ೬೫, ೬೬, ೬೮ರ ಜಮೀನಿನಲ್ಲಿ ೮೫ ಪೋಡಿಯನ್ನು ಕೆ.ವಿ.ಪ್ರಸಾದ್‌ ಮತ್ತವರ ಕುಟುಂಬ ಮಾಡಿಸಿಕೊಂಡಿದ್ದಾರೆ.

ಕೆ.ವಿ.ಪ್ರಸಾದ್‌ ಕುಟುಂಬದ ಹೆಸರಿನಲ್ಲಿರುವ ಕೃಷಿ ಜಮೀನಿನಲ್ಲಿ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿರುವ ಟಾಸ್ಕ್‌ ಪೋರ್ಸ್‌ ಸಮಿತಿಯಲ್ಲಿ ಅನುಮತಿ ಪಡೆಯದೇ ಬಂಡೀಪುರ ಅರಣ್ಯ ಇಲಾಖೆಯ ಮೂಗಿನಡಿಯೇ ಕಾಂಕ್ರೀಟ್‌ ರಸ್ತೆ, ಸೋಲಾರ್‌ ಫೆನ್ಸ್‌, ಅಡ್ಡರಸ್ತೆ ನಿರ್ಮಿಸಿ ಬಡಾವಣೆ ಮಾದರಿಯಲ್ಲಿ ಕಾಮಗಾರಿ ನಡೆಯುತ್ತಿದೆ.

ಕುಂದಕೆರೆ ವಲಯ ಅರಣ್ಯಾಧಿಕಾರಿ, ‘ಕೃಷಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶದ ಮಾದರಿಯಲ್ಲಿ ಕಾಮಗಾರಿ ನಡೆಯುತ್ತಿದೆ, ನಿಲ್ಲಿಸಿ’ ಎಂದು ನೋಟೀಸ್‌ ನೀಡಿದ್ದರು. ಇದಾದ ಬಳಿಕ ಉಪ ವಿಭಾಗಾಧಿಕಾರಿಗೂ ಪತ್ರ ಬರೆದಿದ್ದಾರೆ. ಆನಂತರವೂ ಕಾಮಗಾರಿ ನಡೆಯುತ್ತಿದ್ದು, ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೂ ಪತ್ರ ಬರೆದು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆದರೂ ಕಾಮಗಾರಿ ನಡೆಯುತ್ತಿದೆ ಎಂದು ಪರಿಸರವಾದಿಗಳು ದೂರಿದ್ದಾರೆ.

ವನ್ಯಜೀವಿಗಳಿಗೆ ತೊಂದರೆ:

ಬಂಡೀಪುರ ಪ್ರದೇಶದಂಚಿನಲ್ಲಿ ರೆಸಾರ್ಟ್‌, ಹೋಂ ಸ್ಟೇ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅನುಮತಿ ನೀಡುತ್ತಿಲ್ಲ. ಇದನ್ನು ಗಮನಿಸಿದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಕೃಷಿ ಭೂಮಿಯನ್ನು ತುಂಡು ಹೆಸರಿನಲ್ಲಿ ಪೋಡಿ ಮಾಡಿಸಿ ಫಾರ್ಮ್‌ ಫ್ಲಾಟ್‌ ನಿರ್ಮಿಸಲು ಮುಂದಾಗಿದ್ದಾರೆ. ಪರಿಸರ ಸೂಕ್ಷ್ಮ ವಲಯವಾದ ಮಂಗಲ ಗ್ರಾಮದಲ್ಲಿ ಲೇಔಟ್‌ ಮಾದರಿಯಲ್ಲಿ ಫಾರ್ಮ್‌ ಫ್ಲಾಟ್‌ ನಿರ್ಮಿಸಿದರೆ ವನ್ಯಜೀವಿಗಳಿಗೆ ತೊಂದರೆ ಆಗುತ್ತದೆ.

ಕೃಷಿ ಭೂಮಿ ೫ ಗುಂಟೆ ತನಕ ಖರೀದಿಗೆ ಅವಕಾಶವಿಲ್ಲ. ಆದರೆ ಕೃಷಿ ಭೂಮಿಯಲ್ಲಿ ೭ ಗುಂಟೆಯಿಂದ ೧೨, ೧೩ ಗುಂಟೆ ತನಕ ಒಂದೇ ಭೂಮಿಯಲ್ಲಿ ಜಂಟಿ ಮಾಡುತ್ತಾರೆ. ಆಗ ಜಂಟಿಯಾದ ಬಳಿಕ ಮನೆ ನಿರ್ಮಿಸಲು ಅವಕಾಶವಿದೆ. ಆದರೆ ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶವಾದ ಕಾರಣ ಅನುಮತಿ ಬೇಕೇ ಬೇಕು. ಆದರೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬಡಾವಣೆ ಮಾಡಲು ಹೊರಟಿದ್ದಾರೆ.

--

ಪರಿಸರ ಸೂಕ್ಷ್ಮ ವಲಯದಂಚಿನ ಗ್ರಾಮಗಳಲ್ಲಿ ಕನಿಷ್ಟ ಒಂದು ಎಕರೆ ಭೂಮಿ ಖರೀದಿಗೆ ಅವಕಾಶ ನೀಡಬಾರದು ಹಾಗೂ ಜಂಟಿ ಖಾತೆಗೂ ಭೂಮಿ ತುಂಡು ಮಾಡಲು ಜಿಲ್ಲಾಡಳಿತ ಬಿಡಬಾರದು. ಕಾಡಂಚಿನ ಪ್ರದೇಶದಲ್ಲಿ ಲೇಔಟ್‌ಗೆ ಅಡಿಪಾಯ ಹಾಕಿರುವುದು ಸರಿಯಲ್ಲ. ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.

-ಪ್ರಕಾಶ್‌ ಕಬ್ಬಹಳ್ಳಿ, ರೈತ ಸಂಘದ ಮುಖಂಡ.

---

ಬಂಡೀಪುರ ಕುಂದಕೆರೆ ವಲಯದಲ್ಲಿ ಲೇಔಟ್‌ ಮಾದರಿ ಕಾಮಗಾರಿ ನಡೆಯುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಗೆ ಈ ಬಗ್ಗೆ ತುರ್ತು ಕ್ರಮಕ್ಕೆ ಮನವಿ ಮಾಡಲಾಗುವುದು.

- ಎಲ್.ನಂದೀಶ್‌, ಡಿಸಿಎಫ್‌, ಬಂಡೀಪುರ

---

೨೦೧೨ರಲ್ಲೇ ಲೇಔಟ್‌ನಿಲ್ಸಿದ್ದ ಅರಣ್ಯ ಇಲಾಖೆ

೨೦೧೨ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ಜಕ್ಕಹಳ್ಳಿ ಗ್ರಾಮದ ಸರ್ವೆ ಸಂಖ್ಯೆ. ೫೫, ೫೬, ೧೧೦ರಲ್ಲಿ ಪುಣೆ ಮೂಲದ ಎನ್‌ಎಸ್‌ಬಿ ವೈಲ್ಡ್‌ ಹಂಟ್‌ ಹೆಸರಿನಲ್ಲಿ ಲೇಔಟ್‌ ಮಾಡಲು ಮುಂದಾಗಿದ್ದಾಗ ಅಂದಿನ ಎಪಿಸಿ ಸಿಎಫ್‌ ಹೊಸಮಠ್‌ ಬಡಾವಣೆಗೆ ಅವಕಾಶ ಕೊಟ್ಟಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಇಲಾಖೆ ಕಾಮಗಾರಿ ಆರಂಭವಾದಾಗಲೇ ತಡೆಯೊಡ್ಡುವ ಕೆಲಸ ಮಾಡಬಹುದಿತ್ತು. ತಡವಾಗಿಯಾದರೂ ಲೇಔಟ್‌ ನಡೆಸುವವರಿಗೆ ನೋಟಿಸ್‌ ನೀಡಿದೆ. ಇನ್ನಾದರೂ ಇಂಥ ಕ್ರಮ ವಾಣಿಜ್ಯ ಉದ್ದೇಶದ ಚಟುವಟಿಕೆಗಳಿಗೆ ಮುಂದಾಗಲಿ ಎಂದು ಜನರ ಆಗ್ರಹಿಸಿದ್ದಾರೆ.