ಗ್ರಾಮಗಳಲ್ಲಿ ಅಕ್ರಮ ಗಾಂಜಾ, ಮದ್ಯ ಮಾರಾಟ ದಂಧೆ ನಿರಂತರ

| Published : Oct 30 2025, 01:30 AM IST

ಗ್ರಾಮಗಳಲ್ಲಿ ಅಕ್ರಮ ಗಾಂಜಾ, ಮದ್ಯ ಮಾರಾಟ ದಂಧೆ ನಿರಂತರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಕವಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಂಜಾ ಹಾಗೂ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಮಾರಾಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕೆ ಪೊಲೀಸರ ಪರೋಕ್ಷ ಸಹಕಾರ ಇದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಗಾಂಜಾ ಹಾಗೂ ಮದ್ಯ ಮಾರಾಟ ದಂಧೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಯುವಕರು ಮಾದಕ ವಸ್ತು ವ್ಯಸನಿಗಳಾಗಿ ಕುಟುಂಬಗಳು ಹಾಳಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು, ಮಹಿಳೆಯರು ಶಾಸಕ ಎಚ್.ಟಿ.ಮಂಜು ಅವರಿಗೆ ತಾಲೂಕಿನ ಮಾಕವಳ್ಳಿ ಗ್ರಾಪಂನಿಂದ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದೂರು ನೀಡಿದರು.

ಗ್ರಾಮದಲ್ಲಿ 40 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ, ಗ್ರಾಪಂ ಕಟ್ಟಡದ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಗ್ರಾಪಂ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗಾಂಜಾ ಮತ್ತು ಮದ್ಯ ಮಾರಾಟದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಮಾಕವಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಂಜಾ ಹಾಗೂ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಅಕ್ರಮ ಮಾರಾಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕೆ ಪೊಲೀಸರ ಪರೋಕ್ಷ ಸಹಕಾರ ಇದೆ ಎಂದು ಆರೋಪಿಸಿದ ಮುಖಂಡರಾದ ಆಲೋಕ್ ಮತ್ತಿತರರು ಸಂಬಂಧಪಟ್ಟ ವಿಡಿಯೋ ದಾಖಲೆ ಪ್ರದರ್ಶನ ಮಾಡಿ ಕೆಡಿಪಿ ಸಭೆಗೆ ಬಾರದೆ ಚಕ್ಕರ್ ಹಾಕಿರುವ ಕಿಕ್ಕೇರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಡಿಪಿ ಸಭೆಗೆ ಆಹ್ವಾನ ನೀಡಿದರೂ ಬಾರದೇ ಇರುವ ಕಿಕ್ಕೇರಿ ಪೊಲೀಸರು ಸೇರಿದಂತೆ ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.

ನಂತರ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಪಡಿತರ ಚೀಟಿ ಹೊಂದಿರುವ 75 ವರ್ಷ ತುಂಬಿದ ವಯೋವೃದ್ಧರಿಗೆ ಅವರ ಮನೆಗೆ ಪಡಿತರ ವಸ್ತುಗಳನ್ನು ಪೂರೈಕೆ ಮಾಡುವ ಕೆಲಸವನ್ನು ನ್ಯಾಯಬೆಲೆ ಅಂಗಡಿಗಳು ಹಾಗೂ ಸೊಸೈಟಿಗಳು ಮಾಡಬೇಕು. ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದರು.

ಪಡಿತರ ದಾಸ್ತಾನು ಬಂದ ದಿನದಿಂದ ಪ್ರತಿದಿನ ಪಡಿತರ ನೀಡಬೇಕು. ಯಾವುದೇ ಕಾರಣಕ್ಕೂ ರಜೆ ಮಾಡಬಾರದು. ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವೃತ್ತದ ಕೇಂದ್ರ ಸ್ಥಾನದಲ್ಲಿ ಕಚೇರಿ ತೆರೆದು ರೈತರಿಗೆ ಹಾಗೂ ಸಾರ್ವಜನಿಕರಿಗೆ ತಮ್ಮ ಸೇವೆಯನ್ನು ತ್ವರಿತವಾಗಿ ನೀಡಬೇಕು ಎಂದು ಸೂಚಿಸಿದರು.

60 ವರ್ಷ ತುಂಬಿದ ಎಲ್ಲಾ ಅರ್ಹ ವಯೋವೃದ್ಧರಿಗೆ ಅವರ ಮನೆಗೆ ಹೋಗಿ ದಾಖಲೆ ಪಡೆದು ಮಾಸಾಶನ ಮಂಜೂರಾತಿ ಆದೇಶ ಪತ್ರ ಮಾಡಿಸಿಕೊಡಬೇಕು. ವಿವಿಧ ಗ್ರಾಮಗಳಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಿಸಬೇಕು ಎಂದರು.

ಅಂಗನವಾಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ, ಕಿಶೋರಿಯರಿಗೆ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ನೀಡುವ ಮೂಲಕ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ವಿದ್ಯುತ್ ಇಲಾಖೆಯವರು ಮನೆಗಳಿಗೆ ಸರಿಯಾಗಿ ವೋಲ್ಟೇಜ್ ಇರುವಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಬೇಕು. ಗ್ರಾಹಕರು ಕರೆ ಮಾಡಿದಾಗ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಕರೋಠಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡಲು ಕ್ರಮ ವಹಿಸಬೇಕು. ಸಾಧುಗೋನಹಳ್ಳಿ ಬಳಿ ಇರುವ 25 ಎಕರೆ ಭೂಮಿಯನ್ನು ವಸತಿ ರಹಿತರಿಗೆ ನಿವೇಶನ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ತಾಪಂ ಅಧಿಕಾರಿಗಳಿಗೆ ತಿಳಿಸಿದರು.

ವಿವಿಧ ಇಲಾಖೆಗಳಿಗೆ ಕರ್ತವ್ಯ ಪಾಲನೆಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದದ ಶಾಸಕರು, ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕರ್ತವ್ಯವನ್ನು ನಿರ್ವಹಣೆ ಮಾಡಿದರೆ ಜನಪ್ರತಿನಿಧಿಗಳಿಗೆ ಒಳ್ಳೆಯ ಹೆಸರು ಬರುತ್ತದೆ. ಅಲ್ಲದೆ ಅಧಿಕಾರಿಗಳಿಗೂ ಸಾರ್ವಜನಿಕರಿಂದ ಒಳ್ಳೆಯ ಪ್ರಶಂಸೆ ಸಿಗುತ್ತದೆ. ಪ್ರಾಮಾಣಿಕ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಶಾಸಕರು ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ಸಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಶೈಲಜಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಪಂ ಇಒ ಕೆ.ಸುಷ್ಮ, ತಾಲ್ಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಗ್ರಾಪಂ ಉಪಾಧ್ಯಕ್ಷೆ ಎ.ಎನ್.ಸುಜಾತ, ಸದಸ್ಯರಾದ ಎಂ.ಆರ್.ಮಂಜುನಾಥ್, ಎಂ.ಟಿ.ಮಂಜೇಗೌಡ, ಕರೋಟಿ ಅನಿಲ್, ಸಾದುಗೋನಹಳ್ಳಿ ಆರ್.ಕುಮಾರ್, ಬಿ.ಎಸ್.ಶೀಲಾ ಮಹಾದೇವೇಗೌಡ, ವೀಣಾಅಶೋಕ್, ವರಲಕ್ಷ್ಮಿ ಪ್ರದೀಪ್, ಲಿಂಗಾಪುರ ಸಾಕಮ್ಮ, ಜ್ಯೋತಿಸ್ವಾಮಿ, ಕುಂದನಹಳ್ಳಿ ಬೈರಯ್ಯ, ಸವಿತ, ವಿ.ಡಿ.ಮಂಜುನಾಥ್, ಎಂ.ಎ.ಯೋಗೇಶ್, ತಾಪಂ ಮಾಜಿ ಉಪಾಧ್ಯಕ್ಷ ಎಂ.ಸಿ.ರಾಮೇಗೌಡ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ, ಮುಖಂಡರಾದ ಅಲೋಕ್‌ಚಂದ್ರು, ಸುಕಂದರಾಜು, ನಾಗೇಶ್, ಹರೀಶ್, ಪ್ರದೀಪ್, ಮಧು, ಸುನಿಲ್‌ ಸಣ್ಣಯ್ಯ, ಕರೋಟಿ ವಿಜಯ್ ಕುಮಾರ್, ಸುರೇಶ್, ಕುಮಾರ್, ರಜನಿ, ಮನು, ಕುಮಾರ್, ಮಂಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.