ಸಾರಾಂಶ
ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಗೂಡ್ಸ್ ಆಟೋ ಹಾಗೂ ಇದರಲ್ಲಿ ಸಾಗಾಟ ಮಾಡುತ್ತಿದ್ದ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಮದ್ದೂರು ಗ್ರಾಮದ ಅಸ್ಲಂಪಾಷ ಹಾಗೂ ಟಿ. ನರಸೀಪುರದ ರೆಹಮಾನ್ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಗೂಡ್ಸ್ ಆಟೋದಲ್ಲಿ ೨೯ ಪ್ಲಾಸ್ಟಿಕ್ ಚೀಲಗಳಲ್ಲಿ ೧,೫೭೦ ಕೆಜಿ ಅಕ್ಕಿ ತುಂಬಿಕೊಂಡು ಇದರ ಮೇಲೆ ಗುಜರಿ ವಸ್ತುಗಳನ್ನು ಹಾಕಿಕೊಂಡು ಅನುಮಾನ ಬಾರದ ಹಾಗೆ ಮದ್ದೂರು ಗ್ರಾಮದಿಂದ ಯಳಂದೂರು ಕಡೆಗೆ ಬರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಬಿಸಲಯ್ಯ ಸಿಪಿಐ ಶ್ರೀಕಾಂತ್, ಪಿಎಸ್‌ಐ ಆಕಾಶ್, ಪೇದೆಗಳಾದ ಶಿವಕುಮಾರ್, ಜಡೇಸ್ವಾಮಿ, ಉಸ್ಮಾನ್ ನೇತೃತ್ವದ ತಂಡ ದಾಳಿ ನಡೆಸಿ ಇವರನ್ನು ಮಾಲು ಸಮೇತ ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಕಿ ಹಾಗೂ ಆಟೋವನ್ನು ವಶಪಡಿಸಿಕೊಂಡು ಕಾನೂನು ಕ್ರಮ ವಹಿಸಲಾಗಿದೆ.