ಸಾರಾಂಶ
ಎನ್ಎಫ್ಎಸ್ಎಂ ಯೋಜನೆಯಡಿ ರೈತರಿಗೆ ನೀಡಲಾಗಿದ್ದ ಔಷಧಿ । ಕೃಷಿ ಇಲಾಖೆ ತನಿಖಾಧಿಕಾರಿ ರಮೇಶ್ ನೇತೃತ್ವದಲ್ಲಿ ಬಿರುಸಿನ ತನಿಖೆ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಕೃಷಿ ಇಲಾಖೆಯ ಕಸಬಾ ಗೋದಾಮಿನಲ್ಲಿ ಸರ್ಕಾರ, ಕೃಷಿ ಇಲಾಖೆ ವಿತರಿಸದ ಎಂ ಪವರ್ ಔಷಧಿ ಅಕ್ರಮ ದಾಸ್ತಾನು ಪ್ರಕರಣ, ರೈತರಿಗೆ ನೀಡಬೇಕಾದ ಉಚಿತ ಔಷಧಿಯನ್ನು ನಿಯಮ ಉಲ್ಲಂಘಿಸಿ ಮಾರಾಟ ಮಾಡಿಕೊಂಡ ಹಾಗೂ ಪವರ್ ಟಿಲ್ಲರ್ ಇನ್ನಿತರೆ ಯಂತ್ರೋಪಕರಣ ವಿತರಣೆಯಲ್ಲಿ ಅವ್ಯವಹಾರ ಪ್ರಕರಣವನ್ನು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಳೆದ ಒಂದು ವಾರದಿಂದ ಬಿರುಸಿನ ತನಿಖೆಯನ್ನು ರಮೇಶ್ ನೇತೃತ್ವದಲ್ಲಿ ನಡೆಸಿದ್ದಾರೆ.ತನಿಖಾ ತಂಡಕ್ಕೆ ಉಚಿತವಾಗಿ ರೈತರಿಗೆ ನೀಡಬೇಕಾದ ಎನ್ಎಫ್ಎಂ ಯೋಜನೆಯ ಔಷಧಿಗಳನ್ನು ಅಕ್ರಮವಾಗಿ ಕೃಷಿ ಇಲಾಖೆಯ ಅಧಿಕಾರಿ ನಾಗೇಂದ್ರ ಎಂಬುವರು ಮಾರಾಟ ಮಾಡಿಕೊಂಡಿಕೊಂಡಿರುವ ಕುರಿತು ದಾಖಲೆಗಳು ಸಿಕ್ಕಿವೆ. ಅಲ್ಲದೆ ಪವರ್ ಟಿಲ್ಲರ್ ವಿತರಿಸಿದಂತೆ ರೈತರ ಹೆಸರು ತೋರಿಸಿ ಮಾರಾಟ ಮಾಡಿಕೊಂಡಿರುವ ಕುರಿತು ನಾಲ್ಕೈದು ಸಮರ್ಪಕ ಮಾಹಿತಿಗಳು ತನಿಖಾ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕನ್ನಡಪ್ರಭದಿಂದ ಸಮಗ್ರ ತನಿಖೆ: ಕೃಷಿ ಇಲಾಖೆಯಲ್ಲಿ ಮಾರಾಟಕ್ಕಲ್ಲದ ಎಂಪವರ್ ಎಂಬ ಹೆಸರಿನ ಅಕ್ರಮ ಔಷಧಿಯನ್ನು ಕೃಷಿ ಅಧಿಕಾರಿ ದಾಸ್ತಾನು ಮಾಡಿದ್ದರು, ಬಳಿಕ ಕನ್ನಡಪ್ರಭ ಈ ಸಂಬಂಧ ಸವಿವರವಾಗಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಂಪವರ್ ಔಷಧಿ ಮಾಯವಾಗಿತ್ತು. ಈ ಸಂಬಂಧ ಕೃಷಿ ಇಲಾಖೆಯ ಎಡಿಎ ಸುಂದ್ರಮ್ಮ ಅವರು 2 ನೋಟಿಸ್ ನೀಡಿ ಕಾರಣ ಕೇಳಿದ್ದರು. ಈ ಪ್ರಕರಣದಲ್ಲಿ ಲೆಕ್ಕ ಸಹಾಯಕರು ಮತ್ತು ಎಇ ನಾಗೇಂದ್ರ ಇಬ್ಬರ ಬಳಿಯಲ್ಲಿಯೂ ಕೃಷಿ ಸಂಪರ್ಕ ಕೇಂದ್ರದ ಎರಡು ಬೀಗದ ಕೀಗಳನ್ನು ನೀಡಲಾಗಿತ್ತು ಎಂಪವರ್ ಔಷಧಿ ದಾಸ್ತಾನು ಪ್ರಕರಣದಲ್ಲಿ ಇಬ್ಬರು ತಪ್ಪೊಪ್ಪಿಕೊಳ್ಳುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕೈತೊಳೆದುಕೊಂಡಿದ್ದರು. ಪಾಳ್ಯ ಕೖಷಿ ಇಲಾಖೆ ಕೇಂದ್ರಕ್ಕೆ ಸರಬರಾಜು ಮಾಡಬೇಕಿದ್ದ ಉಚಿತ ಔಷಧಿ ಇನ್ನಿತರೆ ಸವಲತ್ತುಗಳನ್ನು ಈಗಿನ ಕೃಷಿ ಅಧಿಕಾರಿ ನಾಗೇಂದ್ರ ಕೊಳ್ಳೇಗಾಲ ಕಸಬಾ ಇಲಾಖಾ ಕಟ್ಟಡದಲ್ಲಿ ಇರಿಸಿಕೊಂಡಿದ್ದ ಪ್ರಕರಣವೂ ವಿವಾದಕ್ಕೀಡಾಗಿತ್ತು. ಎಡಿಎ ಸುಂದ್ರಮ್ಮ ಸಮರ್ಥಿಸಿಕೊಂಡಿದ್ದರು. ಏತನ್ಮಧ್ಯೆ, ಆರೋಪ ಹೊತ್ತ ಕೃಷಿ ಇಲಾಖೆಯ ಎಇ ನಾಗೇಂದ್ರ ನನ್ನ ಬಳಿ ಕೀ ಇರಲಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೂ ಈಡಾಗಿದ್ದರು. ಈ ಸಂಬಂಧ ಅನಾಮದೇಯ ಲೋಕೇಶ್ ಎಂಬ ವ್ಯಕ್ತಿ ನನ್ನ ಬಳಿಯೇ ಹಲವು ದಿನಗಳಿಂದ ಗೋದಾಮಿನ ಕೀ ಇತ್ತು, ನಿನ್ನೆ ನಾಗೇಂದ್ರ (ಎಇ) ತೆಗೆದುಕೊಂಡರು ಎಂಬ ಹೇಳಿಕೆ ಆಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೆ ಸರ್ಕಾರ ಎನ್ಎಫ್ಎಸ್ಎಂ ಯೋಜನೆಯಡಿ ಉಚಿತ ರೈತರ ವಿತರಣೆಗೆ ನೀಡಲಾದ ಔಷಧಿ, ಗೊಬ್ಬರಗಳನ್ನು ಮಾರಾಟ ಮಾಡಲಾಗಿದೆ, ಯಾಂತ್ರಿಕರಣ ವಿತರಣೆಯಲ್ಲೂ ಲೋಪವಾಗಿದೆ ಎಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತಲ್ಲದೆ ಕೃಷಿ ಇಲಾಖೆಗೆ ಕಾಯಂ ತಾಂತ್ರಿಕ ಅಧಿಕಾರಿ ವರ್ಗವಾಗಿ ಬಂದರೂ ಎರವಲು ಸೇವೆಯಲ್ಲಿರುವ ದೊರೈರಾಜು ಎಂಬುವರನ್ನು ಮುಂದುವರೆಸಲಾಗುವ ಮೂಲಕ ತಾಂತ್ರಿಕ ಅಧಿಕಾರಿ ವಿಜಯಲಕ್ಷ್ಮಿ ಅವರಿಗೆ ಚಾರ್ಜ್ ಕೊಡಿಸದೆ ಕರ್ತವ್ಯಲೋಪ ಎಸಗಲಾಗಿದೆ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಈ ಪ್ರಕರಣಗಳ ತನಿಖೆಯೂ ಹಿರಿಯ ಅಧಿಕಾರಿಗಳ ಅಂಗಳದಲ್ಲಿದ್ದು ತನಿಖೆ ಚುರುಕುಗೊಳಿಸಿರುವುದರಿಂದ ಮುಂದಾಗುವ ಬೆಳವಣಿಗೆ ಕಾದು ನೋಡಬೇಕಿದೆ. ನಿಯಮ ಉಲ್ಲಂಘಿಸಿ ಪೈಪ್ ಗಳ ದಾಸ್ತಾನು, ವಿಡಿಯೋ ವೈರಲ್: ಕೃಷಿ ಅಧಿಕಾರಿಯಾದ ಎಇ ನಾಗೇಂದ್ರ ವಿರುದ್ಧ ಅನೇಕ ಗಂಭೀರ ಆರೋಪಗಳಿವೆ. ತನಿಖೆ ಚುರುಕಿನಿಂದ ನಡೆಯುತ್ತಿದ್ದು ಏತನ್ಮಧ್ಯೆ, ನಾಗೇಂದ್ರ ಅವರೇ ಹನೂರಿನ ತೋಟವೊಂದರಲ್ಲಿ ಇಲಾಖೆಯ ಸವಲತ್ತುಗಳಾದ (ಸ್ಪಿಂಕ್ಲರ್ ಪೈಪ್) ಅಕ್ರಮ ದಾಸ್ತಾನು ಮಾಡಿರುವ ಕುರಿತು ರೈತರಿಂದಲೇ ಗಂಭೀರ ಆರೋಪ ಕೇಳಿ ಬಂದಿದೆ. ಮಾತ್ರವಲ್ಲ ಈ ಸಂಬಂಧ ರೈತರೊಬ್ಬರು ಇಲಾಖೆಯಲ್ಲಿ ಇರಬೇಕಾದ್ದು ಇಲ್ಲಿ ದಾಸ್ತಾನು ಸರಿಯಲ್ಲ, ಇದರಲ್ಲಿ ಅಕ್ರಮದ ವಾಸನೆ ಇದೆ ಎಂದು ಮಾತನವಾಡಿರುವ ವಿಡಿಯೋ ಸಹ ವೈರಲ್ ಆಗಿದೆ. ನಾವು ಕೃಷಿ ಇಲಾಖೆಯಲ್ಲಿನ ಎನ್ಎಂಎಸ್ಎಂ ಔಷಧಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಇ ನಾಗೇಂದ್ರ ಎಂಬುವರ ವಿರುದ್ಧ ಗಂಭೀರ ಆರೋಪಗಳಿರುವ ಹಿನ್ನೆಲೆ ತನಿಖೆ ಪತ್ರಿಕೆ ಆಧರಿಸಿ ಅಧಿಕಾರಿಗಳ ಸೂಚನೆ ಮೇರೆಗೆ ತನಿಖೆ ನಡೆಸಲಾಗುತ್ತಿದ್ದು ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುತ್ತೇವೆ. ಪವರ್ ಟಿಲ್ಲರ್ ಸಂಬಂಧಿಸಿದಂತೆ ರೈತರ ಜಮೀನು, ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ರಮೇಶ್, ಕೃಷಿ ಇಲಾಖೆ ವಿಚಕ್ಷಣ ತಂಡದ ತನಿಖಾಧಿಕಾರಿ
ಸ್ಪಿಂಕ್ಲರ್ ಪೈಪ್ ಗಳು ಭಾನುವಾರ ಹನೂರಿನ ತೋಟವೊಂದರಲ್ಲಿ ಅಕ್ರಮ ದಾಸ್ತಾನು ಮಾಡಿದ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಅದನ್ನ ವಾಪಸು ತರಿಸಿಕೊಳ್ಳಲಾಗುವುದು. ಮಾದೇಶ್ ಎನ್ನುವವರು ನನಗೆ ಕರೆ ಮಾಡಿದಾಗಲೆ ವಿಚಾರ ತಿಳಿದಿದೆ.ಸುಂದ್ರಮ್ಮ. ಎಡಿಎ ಕೊಳ್ಳೇಗಾಲ ಕೖಷಿ ಇಲಾಖೆ