ಲಿಂಗನಬಂಡಿಯಲ್ಲಿ ಸುಮಾರು ೩ಸಾವಿರ ಜನಸಂಖ್ಯೆ ಇದೆ. ಯುವಕರು, ಹಿರಿಯರು ಕುಡಿತದ ಚಟಕ್ಕೆ ಅಂಟಿಕೊಂಡಿದ್ದಾರೆ.ಪರಿಣಾಮ ಕೌಟುಂಬಿಕ ಕಲಹ ಹೆಚ್ಚುತ್ತಿವೆ

ಯಲಬುರ್ಗಾ: ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆದಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕುಡುಕರು ಮದ್ಯದ ಪೌಚ್‌ ಕುಡಿದು ಬಿಸಾಕಿದ್ದಾರೆ.

ಶಾಲಾ ಆವರಣ ಮತ್ತು ಕೊಠಡಿಗಳಲ್ಲಿ ಮದ್ಯ ಸೇವಿಸಿ ಪೌಚ್‌ಗಳನ್ನು ನಿತ್ಯ ಎಸೆಯಲಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸ್ವಚ್ಛಗೊಳಿಸುವ ಕಾಯಕವಾಗಿದೆ. ಇದರಿಂದ ಕಿರಿಕಿರಿ ಉಂಟಾಗಿದ್ದಲ್ಲದೆ ಇದು ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಅಬಕಾರಿ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಂಗನಬಂಡಿಯಲ್ಲಿ ಸುಮಾರು ೩ಸಾವಿರ ಜನಸಂಖ್ಯೆ ಇದೆ. ಯುವಕರು, ಹಿರಿಯರು ಕುಡಿತದ ಚಟಕ್ಕೆ ಅಂಟಿಕೊಂಡಿದ್ದಾರೆ.ಪರಿಣಾಮ ಕೌಟುಂಬಿಕ ಕಲಹ ಹೆಚ್ಚುತ್ತಿವೆ.ಗ್ರಾಮದಲ್ಲಿ ನಾನಾ ಕಡೆ ಮದ್ಯ ಅಕ್ರಮ ಮಾರಾಟ ಜೋರಾಗಿ ನಡೆಯುತ್ತಿದೆ. ಗ್ರಾಮದಲ್ಲಿ ಮದ್ಯ ಅಕ್ರಮಕ್ಕೆ ಅವಕಾಶ ಮಾಡಿಕೊಡಬಾರದು. ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿರುವ ಅಂಗಡಿ ಮುಚ್ಚಿಸುವಂತೆ ಹಿರಿಯರು, ಸಾರ್ವಜನಿಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ಬಳಿಕ ಗ್ರಾಮಕ್ಕೆ ಎರಡೂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಎಂದು ಮಳಿಯಪ್ಪ ಕಮ್ಮಾರ, ಶಂಬುಲಿಂಗಯ್ಯ ಹಿರೇಮಠ, ಪ್ರಭುಗೌಡ ಮಾಲಿಪಾಟೀಲ್, ಹನುಮಪ್ಪ ಗುರಿಕಾರ, ಕೂಡ್ಲೆಪ್ಪ ಕುಂಬಾರ, ಕುಶಾ ಬೇವಿನಗಿಡದ, ಸಣ್ಣಹನುಮಂತ ದೊಡ್ಮನಿ, ರಮೇಶ ಮಡಿವಾಳರ, ಪತ್ರಕರ್ತರಾದ ಮರಿಸ್ವಾಮಿ ಲಿಂಗನಬಂಡಿ, ಶರಣಬಸವ ಚನ್ನದಾಸರ, ಸೋಮನಗೌಡ ಮಾಲಿಪಾಟೀಲ್, ಮಳಿಯಪ್ಪ ಕಳ್ಳಿಮರದ ತಿಳಿಸಿದರು.

ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ನಿರಾಸಕ್ತಿ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ವರ್ಷ ಕಳೆದರೂ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು,ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ. ಗ್ರಾಪಂ ಅನುದಾನದಲ್ಲಿ ಕಾಮಗಾರಿ ನಡೆಸಲಾಗುವುದೆಂದು ಭರವಸೆ ನೀಡಿ ಎರಡು ವರ್ಷ ಕಳೆದರೂ ಇನ್ನೂ ಕಾಂಪೌಂಡ್ ನಿರ್ಮಾಣವಾಗಿಲ್ಲ. ಹೀಗಾಗಿ ಶಾಲಾ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ದೂರಿದರು.