ಗದಗ ತಾಲೂಕಿನಲ್ಲಿ ಕಾನೂನುಬಾಹಿರ ಮದ್ಯ ಮಾರಾಟ

| Published : Jul 02 2024, 01:37 AM IST

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಬಾರ್‌ಗಳಲ್ಲಿ ಗ್ರಾಹಕರ ಸುಲಿಗೆ ಮಾಡಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳೇ ಪರೋಕ್ಷವಾಗಿ ಬಾರ್ ಮಾಲೀಕರೊಂದಿಗೆ ಕೈ ಜೋಡಿಸಿದ್ದಾರೆ ಎನ್ನುವುದು ಮದ್ಯಪ್ರಿಯರ ಸಾಮಾನ್ಯ ದೂರು.

ಮಹೇಶ ಛಬ್ಬಿ

ಗದಗ: ಜಿಲ್ಲಾ ಕೇಂದ್ರವಾಗಿರುವ ಗದಗ-ಬೆಟಗೇರಿ ಅವಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಬಾರ್‌ಗಳಲ್ಲಿ ಗ್ರಾಹಕರ ಸುಲಿಗೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಅಕ್ರಮ, ನಿಯಮ ಉಲ್ಲಂಘನೆಗಳು ಅವ್ಯಾಹತವಾಗಿ ನಡೆಯುತ್ತವೆ, ಅಬಕಾರಿ ಇಲಾಖೆ ಅಧಿಕಾರಿಗಳೇ ಪರೋಕ್ಷವಾಗಿ ಬಾರ್ ಮಾಲೀಕರೊಂದಿಗೆ ಕೈ ಜೋಡಿಸಿದ್ದಾರೆ ಎನ್ನುವುದು ಮದ್ಯಪ್ರಿಯರ ಸಾಮಾನ್ಯ ದೂರು.

ಕಾನೂನು ಪ್ರಕಾರ ಮದ್ಯ ಮಾರಾಟ ಮಾಡಲು ಸರ್ಕಾರ ಅಬಕಾರಿ ಇಲಾಖೆಯ ಮೂಲಕವೇ ಅವಕಾಶ ಕಲ್ಪಿಸಿದೆ. ಅದಕ್ಕಾಗಿ ಲೈಸೆನ್ಸ್ ಕೂಡಾ ನೀಡಿದೆ. ಅಷ್ಟೇ ಅಲ್ಲದೆ ಯಾವಾಗ, ಎಷ್ಟು ಮತ್ತು ಹೇಗೆ ಮಾರಾಟ ಮಾಡಬೇಕು ಎನ್ನುವುದಕ್ಕೆ ಸ್ಪಷ್ಟವಾದ ನಿಯಮ ರೂಪಿಸಲಾಗಿದೆ. ಆದರೆ ಗದಗ ತಾಲೂಕಿನಲ್ಲಿ ಮಾತ್ರ ಅಧಿಕಾರಿಗಳು ಸರ್ಕಾರ ರೂಪಿಸಿರುವ ನಿಯಮಗಳು ಇರುವುದೇ ಉಲ್ಲಂಘನೆ ಮಾಡಲು ಎನ್ನುವಂತೆ ವರ್ತಿಸುತ್ತಿರುವುದು ಹಲವು ರೀತಿಯ ಸಂಶಯಕ್ಕೆ ಕಾರಣವಾಗಿದೆ.

ಎಗ್ಗಿಲ್ಲದೇ ಮಾರಾಟ: ಖಾಸಗಿ ಹಾಗೂ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ಬಾರ್‌ಗಳ ಪರವಾನಗಿ ಪಡೆಯುವಾಗ ನೀಡಿರುವ ನಿಯಮಗಳು ಗದಗ ತಾಲೂಕಿನ ಯಾವ ಬಾರ್‌ಗಳಲ್ಲಿಯೂ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಅಬಕಾರಿ ಇಲಾಖೆಗೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಪರೋಕ್ಷವಾಗಿ ಅವರ ಕೃಪಾಕಟಾಕ್ಷ ಇದೆ ಎನ್ನುವುದು ಗೋಚರವಾಗುತ್ತಿದೆ.

ಪಾಲನೆ ಇಲ್ಲ:

ಸಿಎಲ್‌-2, ಸಿಎಲ್‌-4 ಇನ್ನಿತರ ವರ್ಗದ ಬಾರ್‌ಗಳಲ್ಲಿ ಕಾನೂನುಬಾಹಿರವಾಗಿ, ರಾಜರೋಷವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯದಂಗಡಿಗೆ ಪರವಾನಗಿ ನೀಡುವ ಸಮಯದಲ್ಲಿ ಸರ್ಕಾರ ಕೆಲವು ಷರತ್ತುಗಳು ಹಾಗೂ ಸಮಯವನ್ನು ನಿಗದಿ ಮಾಡಿಯೇ ಸ್ಪಷ್ಟ ಸೂಚನೆ ನೀಡಲಾಗಿದೆ. ಆದರೆ ಇದನ್ನೆಲ್ಲ ಗಾಳಿಗೆ ತೂರಿ ಮದ್ಯದಂಗಡಿಗಳ ಮಾಲೀಕರು ಮಾತ್ರ ಇದ್ಯಾವುದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವುದು, ಗ್ರಾಹಕರ ಶೋಷಣೆಗೆ ಕಡಿವಾಣ ಇಲ್ಲದಂತಾಗಿದೆ.

ಸಿಎಲ್-2: ಈ ಪರವಾನಗಿ ಪಡೆದ ಅಂಗಡಿಗಳಲ್ಲಿ ಮದ್ಯ ಕುಡಿಯುವಂತಿಲ್ಲ. ಆದರೆ ಕೆಲವು ಆಸನಗಳನ್ನು ಹಾಕಿ ಮದ್ಯಪ್ರಿಯರಿಗೆ ಅಲ್ಲಿಯೇ ಕುಳಿತು ಕುಡಿಯಲು ಮದ್ಯ ಪೂರೈಸಲಾಗುತ್ತಿದೆ. ಈ ಪರವಾನಗಿ ಪಡೆದ ಸನ್ನದುದಾರರು ಅಂಗಡಿಗಳಲ್ಲಿ ಒಂದು ಗ್ಲಾಸ್ ಸಹ ಇಡುವಂತಿಲ್ಲ. ಟೇಬಲ್ ಕುರ್ಚಿಗಳನ್ನು ಹಾಕಿ, ಗಿರಾಕಿಗಳಿಗೆ ಮದ್ಯ ಪೂರೈಸಬಾರದು, ನೀರು ಸಹ ಕೊಡುವಂತಿಲ್ಲ ಎಂಬ ನಿಯಮವಿದೆ. ಆದರೆ ಇಲ್ಲಿ ನಿಯಮಕ್ಕೆ ಬೆಲೆಯಿಲ್ಲ. ಅಷ್ಟೇ ಅಲ್ಲದೆ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಕೂಡಾ ಮಾಡುತ್ತಾರೆ.

ಇನ್ನು ಸಿಎಲ್‌-4 ಕ್ಲಬ್‌ಗಳಿಗೆ ನೀಡುವ ಸನ್ನದು. ಈ ಪರವಾನಗಿ ಪಡೆದವರು ಷರತ್ತುಗಳನ್ನು ಪಾಲಿಸುತ್ತಿಲ್ಲ. ಕ್ಲಬ್‌ ಸದಸ್ಯರಿಗೆ ಮಾತ್ರ ಮದ್ಯ ಪೂರೈಸಬೇಕು. ಆದರೆ ಇಲ್ಲಿ ಎಲ್ಲರಿಗೂ ಮದ್ಯ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಡಬ್ಬಿ ಅಂಗಡಿಗಳಿಗೆ ಬೈಕ್‌ ಮೇಲೆ ತೆರಳಿ ಮದ್ಯ ಸರಬರಾಜು ಮಾಡುತ್ತಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಅಬಕಾರಿ ಇಲಾಖೆ ಅಧಿಕಾರಿಗಳು ಇದಕ್ಕೆಲ್ಲ ಕಡಿವಾಣ ಹಾಕಬೇಕು. ಆದರೆ ಹೆಚ್ಚಿನ ಮದ್ಯ ಮಾರಾಟ ಮಾಡಿದ ದಾಖಲೆಗಳೊಂದಿಗೆ ಮೇಲಧಿಕಾರಿಗಳ ಶಹಬ್ಬಾಸ್‌ಗಿರಿ ಪಡೆಯುತ್ತಾರೆ!

ಮಠದ ಸುತ್ತ ಮದ್ಯದಂಗಡಿ: ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಶಾಲೆ, ಗುಡಿ, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳ ಸುತ್ತಲೂ ಮದ್ಯದ ಅಂಗಡಿಗಳು ಇರುವಂತಿಲ್ಲ. ಆದರೆ ಇತಿಹಾಸ ಪ್ರಸಿದ್ಧ ತೋಂಟದಾರ್ಯ ಮಠದ ಸುತ್ತಲೂ ಮದ್ಯದಂಗಡಿಗಳಿವೆ. ಇಂತಹ ಹಲವು ಉದಾಹರಣೆ ತೋರಿಸಬಹುದು. ಅಂತಹ ಬಾರ್‌ಗಳ ಲೈಸೆನ್ಸ್ ನವೀಕರಣವಾಗಬಾರದು, ಆದರೆ ಅಬಕಾರಿ ಅಧಿಕಾರಿಗಳು ಮಾಡಿಕೊಡುತ್ತಿದ್ದಾರೆ.

ನಿತ್ಯವೂ ಸಾವಿರಾರು ಸಂಖ್ಯೆಯ ಮದ್ಯಪ್ರಿಯರಿಂದಲೇ ಸರ್ಕಾರಕ್ಕೆ ವ್ಯಾಪಕವಾದ ಹಣ ಬರುತ್ತಿದ್ದರೂ ಮದ್ಯಪ್ರಿಯರ ಶೋಷಣೆ ಮಾತ್ರ ನಿಲ್ಲುತ್ತಿಲ್ಲ.