ಬಲ್ಲಾಳಸಮುದ್ರ ಗ್ರಾಮದ ಬಳಿ ಹೊಸದಾಗಿ ಮರಳು ಸಂಗ್ರಹಿಸಿರುವುದು

ಎನ್‌.ವಿಶ್ವನಾಥ್‌ ಶ್ರೀರಾಂಪುರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಚಿತ್ರದುರ್ಗ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಸೇರಿದಂತೆ ಮರಳು ಇನ್ನಿತರೆ ಗಣಿಗಾರಿಕೆ ವಸ್ತುಗಳು ಕಾನೂನಾತ್ಮಕವಾಗಿಯೇ ಅಕ್ರಮ ಸಾಗಾಟ ನಡೆಸುತ್ತಿರುವ ಸಂಗತಿ ಬೆಳೆಕಿಗೆ ಬರುತ್ತಿದೆ.

ಹೊಸದುರ್ಗ ತಾಲೂಕು ಕಳೆದ 7-8 ವರ್ಷಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆಗೆ ಹೆಸರುವಾಸಿಯಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಕ್ಯಾಂಟರ್‌ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸಿದ್ದನ್ನು ನಾವು ಕಂಡಿದ್ದೆವು ಆದರೆ ನಂತರ ದಿನಗಳಲ್ಲಿ ಭದ್ರಾ ನೀರು ಹರಿದು ವೇದಾವತಿ ನದಿ ಪಾತ್ರದಲ್ಲಿ ನೀರು ತುಂಬಿದ್ದರಿಂದ ತಣ್ಣಗಾಗಿದ್ದ ಮರಳು ಗಣಿಗಾರಿಕೆ ಈಗ ಮತ್ತೆ ಮುನ್ನಲೆಗೆ ಬರಲಾರಂಭಿಸಿದೆ.

ಈ ಹಿಂದೆ ಬಲ್ಲಾಳಸಮುದ್ರ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ತುಂಬಲಾಗಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಕೆ ಅಧಿಕಾರಿಗಳು ವಶಪಡಿಸಿಕೊಂಡು ಅದೇ ಪ್ರದೇಶದ ಸ್ಟಾಕ್‌ ಯಾರ್ಡನಲ್ಲಿ ಸಂಗ್ರಹ ಮಾಡಿದ್ದರು. ಅದನ್ನು ಇತ್ತೀಚಿಗೆ ಚಿತ್ರದುರ್ಗ ಮೂಲದ ವ್ಯಕ್ತಿಗಳಿಗೆ ಟೆಂಡರ್‌ ಮೂಲಕ ಹರಾಜು ಮಾಡಲಾಗಿದ್ದು ಅದನ್ನು ಖಾಲಿ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ನಿತ್ಯಾ ಹತ್ತಾರು ಟಿಪ್ಪರ್‌ ಲಾರಿಗಳಲ್ಲಿ ಮರಳು ಸಾಗಾಣಿಕೆ ಮಾಡಿದರೂ ಸ್ಟಾಕ್‌ ಯಾರ್ಡನಲ್ಲಿರುವ ಮರಳು ಮಾತ್ರ ಖಾಲಿಯಾಗದೆ ಇನ್ನೂ ಹೆಚ್ಚುತ್ತಿದೆ. ಅಲ್ಲದೆ ಸ್ಟಾಕ್‌ ಯಾರ್ಡ ನಲ್ಲಿರುವ ಮರಳು ಹಳೆ ಮರಳಾಗಬೇಕು ಆದರೆ ಹೊಸದಾಗಿ ಮರಳು ಸುರಿದಿರುವುದು ಕಂಡು ಬರುತ್ತಿದೆ. ಇದೊಂದು ವ್ಯವಸ್ಥಿತವಾದ ಅಕ್ರಮ ಮರಳು ಗಣಿಕಾರಿಕೆಯಾಗಿ ರೂಪಗೊಂಡಿದೆ. ಈ ಅಕ್ರಮ ಗಣಿಗಾರಿಕೆಯಲ್ಲಿ ಪೋಲೀಸ್‌ ಇಲಾಕೆಯಲ್ಲಿರುವ ಸ್ಥಳೀಯ ಸಿಬ್ಬಂದಿಗಳು ಭಾಗಿಯಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

*ಇದೊಂದು ಕಾನೂನಾತ್ಮಕ ಅಕ್ರಮ ಗಣಿಗಾರಿಕೆ:

ಚಿತ್ರದುರ್ಗ ಜಿಲ್ಲೆಯಲ್ಲಿಯೇ ಈ ಹಿಂದೆ ವಶಪಡಿಸಿಕೊಂಡಿದ್ದ ಕಬ್ಬಿಣದ ಅದಿರು ಹಾಗೂ ಮರಳನ್ನು ಅಧಿಕಾರಿಗಳು ಟೆಂಡರ್‌ ಮೂಲಕ ಮಾರಾಟಕ್ಕೆ ಅವಕಾಶ ನೀಡಿ ಅದರ ಮೂಲಕ ಅಕ್ರಮ ಗಣಿಗಾರಿಕೆಗೆ ನೆರವಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪಿಸಿದ್ದಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ಅವರು, ಬಲ್ಲಾಳಸಮುದ್ರ ಗ್ರಾಮದ ಬಳಿ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಹಳ್ಳಗಳಲ್ಲಿ ವ್ಯಾಪಕವಾಗಿ ಮರಳು ತೆಗೆಯುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಅಲ್ಲಿ ಹಳೆ ಮರಳನ್ನು ಮಾರಾಟ ಮಾಡಲು ಟೆಂಡರ್ ಕರೆಯಲಾಗಿದೆ. ಆ ಮರಳನ್ನು ಸಾಗಿಸುತ್ತಿದ್ದಾರೆ ಹೊಸದಾಗಿ ಮರಳು ತೆಗೆಯಲು ಅವಕಾಶ ನೀಡಿಲ್ಲ ಎನ್ನುತ್ತಾರೆ ಆದರೆ, ನಿತ್ಯ ಹತ್ತಾರು ಟಿಪ್ಪರ್‌ ಲಾರಿಗಳಲ್ಲಿ ರಾತ್ರಿ ವೇಳೆ ಹಳ್ಳದಲ್ಲಿ ಮರಳನ್ನು ತೆಗೆದು ಸ್ಟಾಕ್‌ ಯಾರ್ಡ್‌ನಲ್ಲಿ ಸಂಗ್ರಹಿಸಲಾಗುತ್ತಿರುವುದು ಅಧಿಕಾರಿಗಳಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದೊಂದು ವ್ಯವಸ್ಥಿತ ಅಕ್ರಮ ಗಣಿಗಾರಿಕೆಯಾಗಿದ್ದು ಈ ಅಕ್ರಮದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳೂ ಬರುತ್ತಿವೆ. ಈ ಅಕ್ರಮದಲ್ಲಿ ಜಿಲ್ಲಾಧಿಕಾರಿಗಳು ಭಾಗಿಯಾಗಿರದಿದ್ದರೆ ಅಕ್ರಮ ಮರಳುಗಣಿಗಾರಿಕೆ ಬಗ್ಗೆ ಗಮನಹರಿಸಲಿ ಅವರೂ ಭಾಗಿಯಾಗಿದ್ದರೆ ಎಲ್ಲರಿಗೂ ಮರಳು ತುಂಬಲು ಅವಕಾಶ ನೀಡಲಿ ಎಂದು ತಿಳಿಸಿದ್ದಾರೆ.

ಬಲ್ಲಾಳ ಸಮುದ್ರ ಭಾಗಶೆಟ್ಟಿಹಳ್ಳಿ ಬಳಿ ಮರಳನ್ನು ಪ್ರತಿ ದಿನ ತೆಗೆಯಲಾಗುತ್ತಿದೆ. ಇದು ಎಲ್ಲಾ ಇಲಾಖೆಯವರ ಗಮನಕ್ಕೂ ತಿಳಿದಿದೆ. ಪೋಲೀಸರು ಸೇರಿದಂತೆ ಕೆಲವು ಸಿಬ್ಬಂದಿ ಬಂದು ಮರಳು ತುಂಬುವವರನ್ನು ಬೆದರಿಸಿ ಹಣ ಪಡೆದು ಹೋಗುತ್ತಾರೆ

-ಬಲ್ಲಾಳಸಮುದ್ರ ಗ್ರಾಮದ ನಿವಾಸಿ.