ಸಾರಾಂಶ
ನದಿಯ ಒಡಲಲ್ಲಿಯೇ ಜೆಸಿಬಿ ಬಳಸಿ ಟಿಪ್ಪರ್‌ನಲ್ಲಿ ಮರಳನ್ನು ತುಂಬಿಸಿ ಸರ್ವೇ ನಂ.9ರ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ರು. 1.58 ಕೋಟಿ ಮೌಲ್ಯದ 20 ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಸಂಗ್ರಹಿಸಿಟ್ಟ ಮರಳಿನೆ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಮರಳನ್ನು ಜಪ್ತಿ ಮಾಡಿಕೊಂಡಿದ್ದಾರೆ.ತಾಲೂಕಿನ ಚಿಕ್ಕರಾಯನಕುಂಪಿ ಸಮೀಪದ ಕೃಷ್ಣಾ ನದಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಜೆಸಿಬಿ ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಸಮೀಪದ ಜಮೀನಿನಲ್ಲಿ ಮರಳನ್ನು ಸಂಗ್ರಹಿಸಿಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪುಷ್ಪಾಲತಾ.ಎಸ್. ಕವಲೂರು ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಸುಮಾರು 1 ಕೋಟಿ 58 ಲಕ್ಷ 26 ಸಾವಿರ 70 ರು. ಮೌಲ್ಯದ 20,000ದಷ್ಟು ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕೃಷ್ಣ ನದಿಯ ಒಡಲಲ್ಲಿಯೇ ಜೆಸಿಬಿ ಬಳಸಿ ಟಿಪ್ಪರ್‌ನಲ್ಲಿ ಮರಳನ್ನು ತುಂಬಿಸಿ ಸರ್ವೇ ನಂ.9ರ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ದಾಳಿ ನಡೆಸಿದ ಅಧಿಕಾರಿಗಳು ವಾಹನ ಮತ್ತು ಮರಳನ್ನು ಜಪ್ತಿ ಮಾಡಿಕೊಂಡಿದ್ದು, ಇಷ್ಟೇ ಅಲ್ಲದೇ ಅಕ್ರಮ ಮರಳು ಸಂಗ್ರಹಕ್ಕೆ ಜಮೀನು ಕೊಟ್ಟ ಭೂಮಾಲೀಕ ಚಂದ್ರಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.