ಮದ್ದೂರು ತಾಲೂಕಿನ ಅಜ್ಜಹಳ್ಳಿ ಮತ್ತು ಹುಲಿಕೆರೆ ಗ್ರಾಮಗಳ ವ್ಯಾಪ್ತಿ ಶಿಂಷಾ ಪಾತ್ರದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ಮರಳು ಗಣಗಾರಿಕೆ ಮತ್ತು ದಾಸ್ತಾನು ಕೇಂದ್ರದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ ಸಾವಿರಾರು ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಅಜ್ಜಹಳ್ಳಿ ಮತ್ತು ಹುಲಿಕೆರೆ ಗ್ರಾಮಗಳ ವ್ಯಾಪ್ತಿ ಶಿಂಷಾ ಪಾತ್ರದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ಮರಳು ಗಣಗಾರಿಕೆ ಮತ್ತು ದಾಸ್ತಾನು ಕೇಂದ್ರದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ ಸಾವಿರಾರು ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಅಧಿಕಾರಿ ಮಹೇಶ್, ಕಂದಾಯ ನಿರೀಕ್ಷಕ ರಾಜೇಶ್, ಗ್ರಾಮ ಆಡಳಿತ ಅಧಿಕಾರಿ ಮಮತಾ ಮತ್ತು ಅಂಜನಪ್ಪ ಅವರ ತಂಡ ಮಾಹಿತಿ ಮೇರೆಗೆ ಎರಡು ಗ್ರಾಮಗಳ ಮರಳು ದಾಸ್ತಾನು ಕೇಂದ್ರಗಳ ಮೇಲೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಾಳಿ ನಡೆಸಿ 50ಕ್ಕೂ ಹೆಚ್ಚುಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳ ದಾಳಿ ವೇಳೆ ಮರಳು ದಂಧೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇವರುಗಳ ವಿರುದ್ಧ ಮದ್ದೂರು ನ್ಯಾಯಾಲಯದಲ್ಲಿ ಗಣಿ ಇಲಾಖೆಯಿಂದ ದೂರು ದಾಖಲು ಮಾಡುವುದಾಗಿ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.

ಅಜ್ಜಹಳ್ಳಿ ಮತ್ತು ಹುಲಿಕೆರೆ, ಕೆ.ಕೋಡಿಹಳ್ಳಿ ಗ್ರಾಮಗಳು ಸೇರಿದಂತೆ ಶಿಂಷಾ ನದಿ ಪಾತ್ರದಲ್ಲಿ ತೆಪ್ಪಗಳ ಸಹಾಯದಿಂದ ಮರಳನ್ನು ಬಗೆದು ನದಿ ದಂಡೆಯಲ್ಲಿ ದಾಸ್ತಾನು ಮಾಡಿದ ನಂತರ ರಾತ್ರಿ ವೇಳೆ ಟಿಪ್ಪರ್ ಲಾರಿಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಕಡೆಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಗಣಿ ಇಲಾಖೆ ಅಧಿಕಾರಿಗಳು, ತಾಲೂಕು ಆಡಳಿತ ಮತ್ತು ಪೊಲೀಸರಿಗೆ ದೂರು ನೀಡಿದ್ದರು.

ಆದರೂ ಸಹ ಎರಡು ಇಲಾಖೆ ಅಧಿಕಾರಿಗಳು ಮರಳು ದಂಧೆ ನಡೆಸುವರೊಂದಿಗೆ ಶಾಮಿಲ್ ಆಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಕ್ರಮ ಮರಳು ದಂಧೆ ವಿಚಾರದಲ್ಲಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಗಳು ನಡೆದು ಸಣ್ಣಪುಟ್ಟ ಘರ್ಷಣೆಗಳಿಗೆ ಕಾರಣವಾಗಿದ್ದರೂ ಸಹ ಈ ಬಗ್ಗೆ ಪೊಲೀಸರು ತಲೆಕೆಡಿಸಿ ಕೊಂಡಿಲ್ಲ ಎಂದು ಗ್ರಾಮದ ಮುಖಂಡರು ಆರೋಪಿಸಿದರು. ಪೊಲೀಸರು ಅಕ್ರಮ ಮರಳು ದಂದೆಗೆ ಕಡಿವಾಣ ಹಾಕದಿದ್ದಲ್ಲಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಮುಖಂಡರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.