ಮಣ್ಣೂರು ಭೀಮಾ ತೀರದಲ್ಲಿ ಮರಳುಗಳ್ಳರ ಹಾವಳಿ

| Published : Mar 18 2024, 01:49 AM IST

ಸಾರಾಂಶ

ಅಫಜಲ್ಪುರ ತಾಲೂಕಿನಲ್ಲಿ ಬತ್ತಿ ಬರಿದಾಗಿರುವ ಭೀಮಾ ನದಿಗೆ ಜೆಸಿಬಿ, ಟ್ರ್ಯಾಕ್ಟರ್‌, ಟಿಪ್ಪರ್‌, ಸಲಿಕೆ, ಬುಟ್ಟಿಗಳೊಂದಿಗೆ ನುಗ್ಗುವ ಮರಳುಗಳ್ಳರು ನದಿಯೊಡಲು ಬೇಕಾಬಿಟ್ಟಿ ಬಗೆದು ಉಸುಕನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಬತ್ತಿ ಬರಿದಾಗಿರುವ ಭೀಮಾ ನದಿಗೆ ಜೆಸಿಬಿ, ಟ್ರ್ಯಾಕ್ಟರ್‌, ಟಿಪ್ಪರ್‌, ಸಲಿಕೆ, ಬುಟ್ಟಿಗಳೊಂದಿಗೆ ನುಗ್ಗುವ ಮರಳುಗಳ್ಳರು ನದಿಯೊಡಲು ಬೇಕಾಬಿಟ್ಟಿ ಬಗೆದು ಉಸುಕನ್ನು ಕಳ್ಳಸಾಗಾಟ ಮಾಡುತ್ತಿದ್ದಾರೆ.

ನಿತ್ಯ ಮಧ್ಯರಾತ್ರಿ 12 ಗಂಟೆ ಆದ್ಮೇಲೆ ಅಫಜಲ್ಪುರ ತಾಲೂಕಿನ ಕೊನೆಯ ಗ್ರಾಮ, ಮಹಾ ಗಡಿಯಲ್ಲಿರೋ ಮಣ್ಣೂರು ಭೀಮಾ ತೀರದಲ್ಲಿ ಈ ಅಪರೂಪದ ದೃಶ್ಯ ಸೃಷ್ಟಿಯಾಗುತ್ತದೆ.

ಕಣ್ಣು ಕೋರೈಸುವ ಪ್ರಖರ ಬೆಳಕಿನ ವ್ಯವಸ್ಥೆ, ಜಗಮಗಿಸುವ ಲೈಟ್‌, ಜೆಬಿಸಿ, ಟಿಪ್ಪರ್‌ಗಳ ಕರ್ಕಶ ಸದ್ದಿನಿಂದಾಗಿ ಇಡೀ ನದಿ ಪರಿಸರ ಕಲುಷಿತವಾಗಿರುತ್ತದೆ. ಮನಸೋ ಇಚ್ಛೆ ಮರಳು ಬಗೆದು ಅದನ್ನು ಟ್ರ್ಯಾಕ್ಟರ್‌, ಟಿಪ್ಪರ್‌, ಲಾರಿಯಲ್ಲೋ ತುಂಬಿಕೊಂಡು ಮರಳುಗಳ್ಳರು ಬೆಳಕು ಆಗೋದ್ರೊಳಗೇ ನದಿ ತೀರದಿಂದ ಕಾಲ್ಕಿತ್ತಿರುತ್ತಾರೆ.

ಮರಳುಗಳ್ಳರಿಗೆ ಪೊಲೀಸ್‌ ಸಾಥ್‌: ಮಣ್ಣೂರಲ್ಲಿ ನದಿ ತೀರದ ಮೇಲೆ ನಿಗಾ ಇಡಲೆಂದೇ ಅಫಜಲ್ಪುರ ಠಾಣೆಯಿಂದ 3 ಪೊಲೀಸರನ್ನೇ ನಿಯೋಜಿಸಿದ್ದಾರೆ. ಹೀಗಿದ್ದರೂ ಇಲ್ಲಿ ಮರಳುಗಳ್ಳತನ ನಿಂತಿಲ್ಲ. ಊರಲ್ಲಿನ ಪರಿಸರ ಪ್ರೇಮಿಗಳ ಪ್ರಕಾರ ನದಿ ತೀರದಲ್ಲಿ ಸಾಗಿರುವ ಬೇಕಾಬಿಟ್ಟಿ ಮರಳು ಕಳವಿಗೆ ಇಲ್ಲಿ ನಿಯೋಜಿತರಾಗಿರುವ ಪೊಲೀಸರೂ ತಮ್ಮ ಕೈಲಾದಷ್ಟು ಸಹಕಾರ ನೀಡುತ್ತಿದ್ದಾರಂತೆ.

ಮರಳು ತುಂಬಿಕೊಂಡು ಅಲ್ಲಿಂದ ಸಾಗುವ ಪ್ರತಿಯೊಂದು ವಾಹನಕ್ಕೆ ತಲಾ ₹6 ಸಾವಿರದಂತೆ ಹಣ ನಿಗದಿಮಾಡಿ ಅದನ್ನು ಪ್ರತಿರಾತ್ರಿ ಪಾಳಿ ಪ್ರಕಾರ ವಸೂಲು ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.

ಊರಲ್ಲಿ ಮರಳುಗಳ್ಳರೇ ಸುಮ್ಮನಿದ್ದರೂ ಕೂಡಾ ನದಿ ರಕ್ಷಣೆಗೆಂದೇ ನಿಯೋಜಿತರಾಗಿರುವವರೇ ಅವರನ್ನು ಪ್ರೇರೇಪಿಸಿ ನದಿ ತೀರದಲ್ಲಿ ರಾತ್ರಿ ಉಸುಕಿನ ಕಳವಿಗೆ ಕಾರಣರಾಗುತ್ತಿದ್ದಾರೆಂಬ ಮಾತುಗಳೂ ಮಣ್ಣೂರಲ್ಲಿನ ಪ್ರಾಮಾಣಿಕರು ಕನ್ನಡಪ್ರಭದೊಂದಿಗೆ ಹೇಳಿದ್ದಾರೆ.

ಮರಳು ಗಣಿಗಾರಿಕೆಗೆ ಪರವಾನಗಿ ಇರಬೇಕು, ಈ ಊರಲ್ಲಿ ಯಾರಿಗೂ ಪರವಾನಿಗೆಯೇ ಇಲ್ಲವೆಂಬುದು ಅಧಿಕೃತ ಮಾಹಿತಿ. ಆದಾಗ್ಯೂ ಇಲ್ಲಿನ ನದಿ ತೀರ ನೋಡಿದರೆ ಸಾಕು ಎಲ್ಲಿ ಬೇಕೆಂದರಲ್ಲಿ ಮರಳು ರಾಶಿ, ಕಂದಕಗಳೇ ಕಾಣುತ್ತಿವೆ. ಕಳೆದೊಂದು ವಾರದಿಂದ ಮರಳಿನ ಅವ್ಯಾಹತ ಕಳ್ಳಸಾಗಾಟಕ್ಕೆ ಇವೆಲ್ಲವೂ ಕನ್ನಡಿ ಹಿಡಿದಿದೆ.

ಒಂದು ಅಂದಾಜಿನಂತೆ ನಿತ್ಯ ರಾತ್ರಿ 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಮರಳು ಕಳವು ಇಲ್ಲಿಂದ ನಡೆಯುತ್ತಿದ್ದೂರ ಪೊಲೀಸರು, ಕಂದಾಯ ಇಲಾಖೆ, ಪಿಡಬ್ಲ್ಯೂಡಿ, ಜಿಲ್ಲಾಡಳಿತ ಜಾಣ ಕುರುಡಾಗಿದೆ. ಮೊದಲೇ ನದಿಯಲ್ಲಿ ಹನಿ ನೀರು ಇಲ್ಲ, ಮರಳುಗಳ್ಳರಿಗೆ ನದಿಯಲ್ಲಿನ ಈ ವಾತಾವರಣ ಹಬ್ಬದಂತೆ ಕಂಡಿದೆ. ಹೀಗಾಗಿ ಅವರೆಲ್ಲರೂ ಗುಂಪಾಗಿ, ಗುಟ್ಟಾಗಿ, ಎಲ್ಲರನ್ನು ಬುಟ್ಟಿಗೆ ಹಾಕಿಕೊಂಡು ಮರಳು ಕಳವು ಮಾಡುತ್ತ ಸಂಭ್ರಮಿಸುತ್ತಿದ್ದಾರೆ.

ಊರಲ್ಲಿ ಅಹೋರಾತ್ರಿ ಮರಳಿನ ಟ್ರ್ಯಾಕ್ಟರ್‌ಗಳದ್ದೇ ಸದ್ದು, ಅನೇಕರಿಗೆ ನಿದ್ರೆಯೂ ಆಗದಂತಾಗಿದೆ. ಊರಿನ ಹೊರಗಿನಿಂದ ಮರಳು ಸಾಗಾಟ ಮಾಡದೆ ಊರೊಳಗಿಂದಲೇ ಟ್ರ್ಯಾಕ್ಟರ್‌, ಟಿಪ್ಪರ್‌ ಅಬ್ಬರಿಸುತ್ತ ಓಡಾಡೋದು ಕಂಡು ಊರವರು ಕಂಗಾಲಾಗಿದ್ದಾರೆ. ರಾತ್ರಿ ಬೆಳತನಕ ಜಾಗರಣೆ ಮಾಡುತ್ತ ತೂಕಡಿಸುವಂತಾಗಿದೆ ಎಂದು ನಿದ್ರೆ ಇಲ್ಲದವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿ ಅಲವತ್ತುಕೊಂಡಿದ್ದಾರೆ.

ಊರ ತುಂಬೆಲ್ಲಾ ಅಕ್ರಮ ದಾಸ್ತಾನು: ಮಣ್ಣೂರನ್ನು ಒಂದು ಬಾರಿ ಸುತ್ತಾಡಿದರೆ ಸಾಕು, ಖಾಲಿ ಹೊಲಗದ್ದೆಗಳಲ್ಲೋ, ನದಿ ತೀರದ ಇಕ್ಕೆಲಗಳಲ್ಲೋ, ಖುಲ್ಲಾ ಜಾಗಗಳಲ್ಲೋ ಉಸುಕಿನ ರಾಶಿಯೇ ಕಣ್ಣಿಗೆ ರಾಚುತ್ತದೆ. ರಾತ್ರಿಪೂರಾ ಅಕ್ರಮವಾಗಿ ನದಿಯೊಡಲು ಬಗೆದು ಸಂಗ್ರಹಿಸುವ ಉಸುಕನ್ನು ಹೀಗೆ ಅವರವರ ಜಾಗದಲ್ಲಿ ದಾಸ್ತಾನು ಮಾಡುತ್ತಾರೆ, ನಂತರ ಸೊಲ್ಲಾಪುರ, ಅಕ್ಕಲಕೋಟೆ ಬಿಲ್ಡರ್‌ಗಳೊಂದಿಗೆ ಮಾತುಕತೆ ನಡೆಸಿ ಮಾರಾಟ ಮಾಡುತ್ತಾರೆ. ಇಡೀ ಊರಲ್ಲೇ ಮರಳು ರಾಶಿ ದಾಸ್ತಾನು ಇದ್ದರೂ ಕಂದಾಯ, ಪೊಲೀಸರಿಗೆ ಅದ್ಹೇಗೆ ಇವೆಲ್ಲ ಕಾಣೋದಿಲ್ಲವೆಂಬುದೇ ಮಣ್ಣೂರಿನ ಪ್ರಾಮಾಣಿಕ ಹಾಗೂ ಪರಿಸರ ಪ್ರೇಮಿ ನಾಗರಿಕರ ಪ್ರಶ್ನೆಯಾಗಿದೆ.

ಸಚಿವ ಪ್ರಿಯಾಂಕ್‌ ಖರ್ಗೆ ಗಮನಿಸುವರೆ?: ಮರಳುಗಾರಿಕೆ ಅಕ್ರಮದ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಜಿಲ್ಲಾ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದ್ದರೂ ಮಣ್ಣೂರು ಸೇರಿ ಅಫಜಲ್ಪುರದ ನದಿ ತೀರದ ಹಲವು ಹಳ್ಳಿಗಳಲ್ಲಿ ಅದಿನ್ನು ರಾತ್ರಿ ಸಾಗಿರೋದು ಕಟು ವಾಸ್ತವ. ಪೊಲೀಸರಿದ್ದರೂ ಕೂಡಾ ಮರಳುಗಾರಿಕೆ ಸಾಗಿರೋದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಇನ್ನೂ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಭೀಮಾ ತೀರದ ಜನ ಆಗ್ರಹಿಸುತ್ತಿದ್ದಾರೆ.