ಮೋದಿ ಕಾರ್ಯಕ್ರಮ ವೇದಿಕೆ ಸಿದ್ಧತೆ ಪರಿಶೀಲಿಸಿದ ಯಡಿಯೂರಪ್ಪ

| Published : Mar 18 2024, 01:49 AM IST

ಮೋದಿ ಕಾರ್ಯಕ್ರಮ ವೇದಿಕೆ ಸಿದ್ಧತೆ ಪರಿಶೀಲಿಸಿದ ಯಡಿಯೂರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಶಿವಮೊಗ್ಗದ ನಗರದ ಅಲ್ಲಮಪ್ರಭು ಮೈದಾನಕ್ಕೆ ಶನಿವಾರ ರಾತ್ರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಕಾರ್ಯಕ್ರಮದ ವೇದಿಕೆ ಸಿದ್ಧತೆ ಪರಿಶೀಲಿಸಿದರು. ಮೋದಿಯವರಿಗೆ ನಾನು ಒಂದು ಮಾತು ಕೊಟ್ಟಿದ್ದೇನೆ. 25 ರಿಂದ 26 ಕ್ಷೇತ್ರದಲ್ಲಿ ಗೆದ್ದು ನಿಮ್ಮನ್ನು ನೋಡಲು ನಾನು ಲೋಕಸಭೆಗೆ ಬರ್ತೇನೆ ಎಂದು ಮಾತು ಕೊಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆ ನಗರದ ಅಲ್ಲಮಪ್ರಭು ಮೈದಾನಕ್ಕೆ ಶನಿವಾರ ರಾತ್ರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಕಾರ್ಯಕ್ರಮದ ವೇದಿಕೆ ಸಿದ್ಧತೆ ಪರಿಶೀಲಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿಯವರಿಗೆ ನಾನು ಒಂದು ಮಾತು ಕೊಟ್ಟಿದ್ದೇನೆ. 25 ರಿಂದ 26 ಕ್ಷೇತ್ರದಲ್ಲಿ ಗೆದ್ದು ನಿಮ್ಮನ್ನು ನೋಡಲು ನಾನು ಲೋಕಸಭೆಗೆ ಬರ್ತೇನೆ ಎಂದು ಮಾತು ಕೊಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು. ಒಂದೆರಡು ಆಚೆ, ಈಚೆ ಆಗಬಹುದು. ಶಿವಮೊಗ್ಗ ಕ್ಷೇತ್ರದಲ್ಲಿ ಈಗಾಗಲೇ ಗೆದ್ದು ಆಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಅಂತರಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಜನ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸ ಇದೆ. ನನ್ನ ಅವಶ್ಯಕತೆ ಎಲ್ಲಿದೆಯೋ, ಅಲ್ಲಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಈಶ್ವರಪ್ಪ ಇರುತ್ತಾರೆ:

ಈಶ್ವರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರ ಮನಸ್ಸಿಗೆ ನೋವು ಆಗಿರಬಹುದು. ಪಕ್ಷದ ಮುಖಂಡರು ಅವರ ಬಳಿ ಮಾತನಾಡಿದ್ದಾರೆ. ಎಲ್ಲವೂ ಸರಿಹೋಗುತ್ತದೆ. ಮೋದಿ ಕಾರ್ಯಕ್ರಮದಲ್ಲಿ ಅವರೂ ವೇದಿಕೆ ಮೇಲೆ ಇರುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಈಶ್ವರಪ್ಪ ತಪ್ಪುಗ್ರಹಿಕೆ:

ಈಶ್ವರಪ್ಪ ಪುತ್ರರಿಗೆ ಟಿಕೆಟ್‌ ಕೈ ತಪ್ಪಲು ನಾವ್ಯಾರೂ ಕಾರಣ ಅಲ್ಲ. ಟಿಕೆಟ್‌ ಕೊಡುವುದು ನಾವಲ್ಲ. ಪಾರ್ಲಿಮೆಂಟ್‌ ಬೋರ್ಡ್‌ನಲ್ಲಿ ಚರ್ಚೆಯಾಗಿದೆ. ಅಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದೇ ಅಂತಿಮ. ಅದರಲ್ಲಿ ಸಲಹೆ ಕೊಡಬಹುದೇ ಹೊರತು, ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಈಶ್ವರಪ್ಪ ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ. ಎಲ್ಲವೂ ಸರಿಹೋಗತ್ತೆ. ಈಶ್ವರಪ್ಪ ಅವರನ್ನು ಮನವೊಲಿಸಿ ಅವರನ್ನು ಕಾರ್ಯಕ್ರಮಕ್ಕೆ ತರುವ ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಕಲ್ಬುರ್ಗಿ ಕಾರ್ಯಕ್ರಮ ಯಶಸ್ವಿ:

ಕಲ್ಬುರ್ಗಿಯಲ್ಲಿ ಮೋದಿ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿದೆ. ಕಾರ್ಯಕ್ರಮ ಬಹಳ ಅದ್ಭುತವಾಗಿ ಆಗಿದೆ. ಜನ ಬಂದವರಿಗೆ ನಿಲ್ಲಲು ಜಾಗ ಕೂಡ ಸಾಕಾಗುತ್ತಿರಲಿಲ್ಲ. ಬಹಳ ಒಳ್ಳೆಯ ವಾತಾವರಣ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ಮೋದಿ ಅವರು ನಮ್ಮ ನಿರೀಕ್ಷೆ ಮೀರಿ ಭಾಷಣ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಮೋದಿ ಅವರು ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದಾರೆ. ಮೋದಿ ಅವರು ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ದೇಶಕ್ಕಾಗಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಲು ಪ್ರಯತ್ನ ಮಾಡ್ತಾ ಇದ್ದೇವೆ ಎಂದರು.

- - - (-ಫೋಟೋ: ಬಿಎಸ್‌ವೈ)