ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದ ಪಕ್ಷಿಗಳಿಗಾಗಿ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಇಡಲಾಗುತ್ತಿದೆ. ಅದರಲ್ಲೂ ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಆವರಣದಲ್ಲಿ ತೊಟ್ಟಿ ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲ ಮಾಡಲಾಗಿದೆ.ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲೂ ಗಿಡಗಳಲ್ಲಿ ಪ್ಲೇಟ್‌ನಲ್ಲಿ ಕಾಳು ಹಾಗೂ ನೀರು ಹಾಕಿಡಲಾಗುತ್ತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮರಗಳಲ್ಲೂ ಸಣ್ಣ ಪ್ಲೇಟ್‌ಗಳಲ್ಲಿ ನೀರು ಹಾಕಲಾಗುತ್ತಿದೆ. ಇನ್ನು ನಗರದಲ್ಲಿ ತಾರಸಿಗಳ ಮೇಲೂ ನೀರು ಹಾಕಿಡಲಾಗುತ್ತಿದೆ. ಕಮಲಾಪುರದ ಪರಿಸರ ಪ್ರೇಮಿ ಮಳೀಮಠ ಪಕ್ಷಿಗಳಿಗಾಗಿ ವಿವಿಧ ಜಾತಿಯ ಮರಗಳನ್ನು ಬೆಳೆಸಿ, ನೀರಿನ ವ್ಯವಸ್ಥೆ ಮಾಡಿದ್ದಾರೆ.ಈಗ ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಆವರಣದಲ್ಲಿ ಹಂಪಿ ಪ್ರದೇಶದಲ್ಲಿ ಬರುವ ಪ್ರಾಣಿ, ಪಕ್ಷಿಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಿ ದಿನನಿತ್ಯ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.ವಿವಿಧ ಜಾತಿಯ ಪಕ್ಷಿಗಳು:ಹಂಪಿ ಪ್ರದೇಶದಲ್ಲಿ ಕಮಲಾಪುರ ಕೆರೆ, ಅಳ್ಳಿಕೆರೆಗಳು ಬರುತ್ತವೆ. ಇನ್ನು ಹೊಲ-ಗದ್ದೆಗಳು ಇರುವುದರಿಂದ ಪ್ರಾಣಿ, ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವಿವಿಧ ಜಾತಿಯ ಬೆಳ್ಳಕ್ಕಿಗಳು, ಹಳದಿ ಗಂಟಲಿನ ಪಿಕಳಾರ, ಗಿಜುಗ, ನವಿಲುಗಳು, ಗುಬ್ಬಚ್ಚಿಗಳು, ಮರಕುಟುಕ, ಪಾರಿವಾಳಗಳು ಸೇರಿದಂತೆ ಹಲವು ಜಾತಿಯ ಪಕ್ಷಿಗಳು ಹಂಪಿ ಪ್ರದೇಶದಲ್ಲಿವೆ. ಈ ಭಾಗದಲ್ಲಿ ಕಾಣ ಸಿಗುವ ಪಕ್ಷಿಗಳಿಗಾಗಿ ವನ್ಯಜೀವಿ ಛಾಯಾಚಿತ್ರಗ್ರಾಹಕರು ಹಂಪಿಗೆ ದೌಡಾಯಿಸುತ್ತಾರೆ. ಹಾಗಾಗಿ ಈ ಹಿಂದೆ ರಾಜ್ಯ ಮಟ್ಟದ ಪಕ್ಷಿಪ್ರೇಮಿಗಳ ಸಮಾವೇಶ ಕೂಡ ನಡೆದಿತ್ತು. ಈ ಭಾಗದಲ್ಲಿ 120ಕ್ಕೂ ಅಧಿಕ ಜಾತಿಯ ಪಕ್ಷಿಗಳು ಇವೆ ಎನ್ನುತ್ತಾರೆ ವನ್ಯಜೀವಿ ಪ್ರೇಮಿಗಳು.ಪ್ರಾಣಿ, ಪಕ್ಷಿಗಳಿಗಾಗಿ ನೀರಿನ ತೊಟ್ಟಿ ನಿರ್ಮಾಣ:ಹಂಪಿ ಪ್ರದೇಶದಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇದೆ. ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡಲಾರಂಭಿಸಿವೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಆವರಣಕ್ಕೆ ಪ್ರಾಣಿ, ಪಕ್ಷಿಗಳು ಆಗಮಿಸುತ್ತವೆ. ಇದನ್ನರಿತು ಹೊಟೇಲ್‌ನ ಆವರಣದಲ್ಲಿರುವ ಉದ್ಯಾನದಲ್ಲೇ ನೀರಿನ ತೊಟ್ಟಿ ನಿರ್ಮಿಸಿ ದಿನವೂ ನೀರು ಹಾಕಿಡಲಾಗುತ್ತಿದೆ. ಇದರಿಂದ ಪ್ರಾಣಿ, ಪಕ್ಷಿಗಳಿಗೂ ಅನುಕೂಲವಾಗಿದೆ. ಭಾರೀ ಬಿಸಿಲಿನಿಂದ ಕಂಗೆಡುವ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುವುದನ್ನು ತಪ್ಪಿಸಲು ಈ ಕಾರ್ಯ ಮಾಡಲಾಗಿದೆ.ಹೊಟೇಲ್‌ನ ತಾರಸಿ ಮೇಲೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಹಂಪಿಯಿಂದ ದರೋಜಿ ಕರಡಿಧಾಮ, ಕನ್ನಡ ವಿಶ್ವವಿದ್ಯಾಲಯ, ವಾಜಪೇಯಿ ಜೂಲಾಜಿಕಲ್ ಪಾರ್ಕ್ ಕಡೆಗೆ ತೆರಳುವ ಪಕ್ಷಿಗಳಿಗೆ ಹೊಟೇಲ್‌ನ ಆವರಣ ಹಾಗೂ ತಾರಸಿ ಮೇಲೆ ಕಲ್ಪಿಸಿರುವ ನೀರಿನ ವ್ಯವಸ್ಥೆಯಿಂದ ಅನುಕೂಲವಾಗಲಿದೆ.ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ಆವರಣದಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ತಾರಸಿ ಮೇಲೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿ, ಪಕ್ಷಿ ಸಂಕುಲ ಉಳಿಯಬೇಕು ಎನ್ನುತ್ತಾರೆ ಹೋಟೆಲ್ ಮಯೂರ ಭುವನೇಶ್ವರಿ ಕಮಲಾಪುರ ವ್ಯವಸ್ಥಾಪಕ ಸುನೀಲಕುಮಾರ್ ಎಸ್.ಹಂಪಿ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳು ಹೆಚ್ಚಿವೆ. ಬಿಸಿಲಿನ ಹೆಚ್ಚುತ್ತಿರುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ನೀರಿನ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳಿಗೂ ಅನುಕೂಲ ಆಗಲಿದೆ. ಮನೆಗಳ ತಾರಸಿಗಳ ಮೇಲೂ ನೀರಿನ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಹಂಪಿ ಪ್ರವಾಸಿ ಮಾರ್ಗದರ್ಶಿ ವಿ.ವಿರೂಪಾಕ್ಷಿ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))