ಅಕ್ರಮ ಮರಳು ಸಾಗಾಣಿಕೆ: 2 ಲಾರಿ ವಶ, ಕೇಸ್ ದಾಖಲು

| Published : Jun 24 2024, 01:35 AM IST

ಸಾರಾಂಶ

ವಡಗೇರಾ ತಾಲೂಕಿನ ಕಂದಳ್ಳಿಯ ಭೀಮಾ ನದಿಯಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ಕಂದಳ್ಳಿಯ ಭೀಮಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಮೇರೆಗೆ ವಡಗೇರಾ ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್ ಅವರು ಸ್ಥಳಕ್ಕೆ ತೆರಳಿ, ದಾಳಿ ನಡೆಸಿ, ಅಕ್ರಮ ಮರಳು ತುಂಬಿಕೊಂಡು ಹೋಗುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಕ್ರಮ ಮರುಳುಗಾರಿಕೆಗೆ ಕಡಿವಾಣ ಹಾಕುವುದರ ಜೊತೆಗೆ ತಾಲೂಕು ಆಡಳಿತ ವತಿಯಿಂದ ಅಕ್ರಮ ಮರಳುಗಾರಿಕೆ ವಿರುದ್ಧ ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡಲಾಗುವುದು. ಯಾವುದೇ ರೀತಿಯ ಅಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ಸಾರ್ವಜನಿಕರು ನಮಗೆ ತಿಳಿಸಿ, ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಯಾವುದೇ ಪರವಾನಿಗೆ ಇಲ್ಲದೆ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ವಡಗೇರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅಕ್ರಮ ಮರಳು ಲಾರಿಗಳ ಮೇಲೆ ಕೇಸ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ ಕಾರಣ ಈಗಾಗಲೇ ಎರಡು ಲಾರಿಗಳ ಮೇಲೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಸಂಜೀವ್ ಕುಮಾರ್ ಕಾವಲಿ ಹಾಗೂ ಪೊಲೀಸ್ ಸಿಬ್ಬಂದಿ‌ಗಳು ಹಾಜರಿದ್ದರು.