ರಸ್ತೆಯಲ್ಲೇ ಅಕ್ರಮ ಶೆಡ್‌ ನಿರ್ಮಾಣ: ಮುಡಾದಿಂದ ತೆರವು

| Published : Sep 30 2025, 12:00 AM IST

ರಸ್ತೆಯಲ್ಲೇ ಅಕ್ರಮ ಶೆಡ್‌ ನಿರ್ಮಾಣ: ಮುಡಾದಿಂದ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದ ಆಜಾದ್‌ ನಗರ ನಿವಾಸಿ ಸಫೀರ್‌ ಪಾಷಾ ಎಂಬ ವ್ಯಕ್ತಿ ರಸ್ತೆಯಲ್ಲೇ ಅಕ್ರಮವಾಗಿ ಶೆಡ್‌ ನಿರ್ಮಿಸಿಕೊಂಡಿದ್ದ ವ್ಯಕ್ತಿ. ಹೊಳಲು ಸರ್ಕಲ್‌ ಸಂಪರ್ಕಿಸುವಂತೆ 80 ಅಡಿ ರಸ್ತೆಯನ್ನು ನಿರ್ಮಾಣ ಮಾಡಿ ಚರಂಡಿ ಕೆಲಸವೂ ಪೂರ್ಣಗೊಂಡಿತ್ತು. ಈ ನಡುವೆ ಕಳೆದ ಇಪ್ಪತ್ತು ದಿನಗಳ ಹಿಂದೆ ಸಫೀರ್‌ ಪಾಷಾ ಎಂಬಾತ 80 ಅಡಿ ರಸ್ತೆಯಲ್ಲಿ ಸುಮಾರು 60 ಅಡಿಯವರೆಗೆ ರಸ್ತೆಯಲ್ಲೇ ಅಕ್ರಮವಾಗಿ ಶೆಡ್‌ ನಿರ್ಮಿಸಿದ್ದ.

ಕನ್ನಡಪ್ರಭ ವಾರ್ತೆ ಮಂಡ್ಯ

ವ್ಯಕ್ತಿಯೊಬ್ಬ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ವೊಂದನ್ನು ಮುಡಾ ಅಧಿಕಾರಿಗಳು ಸೋಮವಾರ ಬೆಳಗ್ಗೆ ತೆರವುಗೊಳಿಸಿರುವ ಘಟನೆ ನಗರದ ಸಂತೆಮಾಳ ಬಳಿಯ ಕೆರೆಯಂಗಳ ಪ್ರದೇಶದಲ್ಲಿ ನಡೆದಿದೆ.

ಮಂಡ್ಯದ ಆಜಾದ್‌ನಗರ ನಿವಾಸಿ ಸಫೀರ್‌ ಪಾಷಾ ಎಂಬ ವ್ಯಕ್ತಿ ರಸ್ತೆಯಲ್ಲೇ ಅಕ್ರಮವಾಗಿ ಶೆಡ್‌ ನಿರ್ಮಿಸಿಕೊಂಡಿದ್ದ ವ್ಯಕ್ತಿ. ಹೊಳಲು ಸರ್ಕಲ್‌ ಸಂಪರ್ಕಿಸುವಂತೆ 80 ಅಡಿ ರಸ್ತೆಯನ್ನು ನಿರ್ಮಾಣ ಮಾಡಿ ಚರಂಡಿ ಕೆಲಸವೂ ಪೂರ್ಣಗೊಂಡಿತ್ತು. ಈ ನಡುವೆ ಕಳೆದ ಇಪ್ಪತ್ತು ದಿನಗಳ ಹಿಂದೆ ಸಫೀರ್‌ ಪಾಷಾ ಎಂಬಾತ 80 ಅಡಿ ರಸ್ತೆಯಲ್ಲಿ ಸುಮಾರು 60 ಅಡಿಯವರೆಗೆ ರಸ್ತೆಯಲ್ಲೇ ಅಕ್ರಮವಾಗಿ ಶೆಡ್‌ ನಿರ್ಮಿಸಿಕೊಂಡಿದ್ದನು.

ರಸ್ತೆಯಲ್ಲಿ ಅಕ್ರಮವಾಗಿ ಶೆಡ್‌ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಮುಡಾ ಆಯುಕ್ತ ಕೃಷ್ಣಕುಮಾರ್‌ ಹಲವು ಬಾರಿ ಆತನಿಗೆ ಮೌಖಿಕ ಸೂಚನೆಯನ್ನು ನೀಡಿದ್ದರು. ಅಧಿಕಾರಿ-ಸಿಬ್ಬಂದಿ ಕೂಡ ಶೆಡ್‌ ತೆರವಿಗೆ ಸೂಚಿಸಿದ್ದರೂ ಆತ ತೆರವುಗೊಳಿಸದೆ ಮೊಂಡಾಟ ನಡೆಸಿದ್ದನು. ಇದರಿಂದ ಬೇಸತ್ತಿದ್ದ ಮುಡಾ ಆಯುಕ್ತ ಕೃಷ್ಣಕುಮಾರ್‌ ಅವರು ಸೋಮವಾರ ಬೆಳಗ್ಗೆಯೇ ಜೆಸಿಬಿಯೊಂದಿಗೆ ಸ್ಥಳಕ್ಕೆ ತೆರಳಿ ರಸ್ತೆಯಲ್ಲಿದ್ದ ಶೆಡ್‌ನ್ನು ತೆರವುಗೊಳಿಸಿದರು.

ಅ.3ಕ್ಕೆ ಚಂದ್ರವನ ಆಶ್ರಮದಲ್ಲಿ ನವರಾತ್ರಿ ಸಮಾರೋಪ

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀಮಹಂತ ಶಿವಯೋಗಿ ಮಠ ಟ್ರಸ್ಟ್‌ನಿಂದ ಡಿ.ಎಂ.ಎಸ್ ಚಂದ್ರವನ ಆಶ್ರಮದಲ್ಲಿ ‘ಚಂದ್ರವನ ನವರಾತ್ರಿ ಉತ್ಸವ’ದ ಅಂಗವಾಗಿ ಅ.3ರಂದು ನವರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಕಾವೇರಿ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಮಡಿಲಕ್ಕಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರವನ ನವರಾತ್ರಿ ಉತ್ಸವವು ಸೆ.22ರಿಂದ ನಡೆಯುತ್ತಿದ್ದು, ಅ.1ರಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು 9 ದಿನಗಳ ಪೂರ್ಣಾಹುತಿ ಹೋಮ ನೆರವೇರಿಸುವರು. ಅ.2ರಂದು ಸಂಜೆ 6ಕ್ಕೆ ಬನ್ನಿಪೂಜೆ ನಡೆಯಲಿದ್ದು, ಅ.3ರಂದು ಬೆಳಿಗ್ಗೆ 11ಗಂಟೆಗೆ ನವರಾತ್ರಿ ಸಮಾರೋಪ ಸಮಾರಂಭ, ಕಾವೇರಿ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಮಡಿಲಕ್ಕಿ ವಿತರಣೆ ಮಾಡಲಾಗುವುದು ಎಂದರು.

ಅ.2ರಂದು ನಡೆಯಲಿರುವ ಬನ್ನಿಪೂಜೆಯ ರಥೋತ್ಸವವನ್ನು ಸಂಜೆ 5ಕ್ಕೆ ಕಾಂಗ್ರೆಸ್ ಮುಖಂಡ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಉದ್ಘಾಟಿಸುವರು. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಬನ್ನಿಪೂಜೆ ನೆರವೇರಿಸಲಿದ್ದು, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಡಾ.ವಿ.ಭಾನುಪ್ರಕಾಶ್ ಶರ್ಮ, ಮಾಯಕಾರ ಗುರುಕುಲ ಸಂಸ್ಥಾಪಕ ಡಾ.ಶ್ರೀ.ಮೂಗೂರು ಮಧುದೀಕ್ಷಿತ್ ಆಗಮಿಸಲಿದ್ದಾರೆ. ಈ ವೇಳೆ ಹಲವು ಗಣ್ಯರು ಉಪಸ್ಥಿತರಿರಲಿದ್ದು, ರಂಗರಾಮ್ ಆರ್ಟ್ ಫೌಂಡೇಷನ್‌ನ ಡಾ.ಎಂ.ಎಸ್.ವಿದ್ಯಾಲಕ್ಷ್ಮೀ ತಂಡದಿಂದ ಭರತನಾಟ್ಯ ನೆರವೇರಲಿದೆ ಎಂದು ಹೇಳಿದರು.

ಅ.3ರಂದು ಬೆಳಿಗ್ಗೆ 11ಕ್ಕೆ ನವರಾತ್ರಿ ಸಮಾರೋಪ ಸಮಾರಂಭ, ಕಾವೇರಿ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಮಡಿಲಕ್ಕಿ ವಿತರಣೆ ಕರ‍್ಯಕ್ರಮ ನಡೆಯಲಿದ್ದು, ಬೇಬಿ ಮಠದ ಪೀಠಾಧಿಪತಿ ಡಾ.ಶ್ರೀತಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಶ್ರೀಮಠದ ರಾಷ್ಟ್ರಮಟ್ಟದ ‘ಕಾವೇರಿ ಪ್ರಶಸ್ತಿ’ ಪುರಸ್ಕೃತ ಮೇಘಾಲಯ ರಾಜ್ಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಉದ್ಘಾಟಿಸುವರು.

ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅಧ್ಯಕ್ಷತೆಯ ಕಾರ‍್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಕಾವೇರಿ ಪ್ರಶಸ್ತಿ ಪ್ರದಾನ ಮಾಡುವರು. ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುರಾಯಸ್ವಾಮಿ ಪಿರಮಿಡ್ ಧ್ಯಾನಕೇಂದ್ರ ಉದ್ಘಾಟನೆ ಮಾಡಲಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ದೇವಾಲಯದ ಮುಂಭಾಗದ ಪ್ರಾಂಗಣ ಶಂಕುಸ್ಥಾಪನೆ ನೆರವೇರಿಸುವರು. ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಬಸವರಾಜ್ ನೀಲಪ್ಪ ಶಿವಣ್ಣನವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕೆ.ಎಸ್.ಷಡಕ್ಷರಿ, ಚಿಕ್ಕಮಾದು, ಕೃಷ್ಣಪ್ಪ, ಎಂ.ಎಸ್.ಶಿವಪ್ರಕಾಶ್ ಇದ್ದರು.