ಸಾರಾಂಶ
ಹಾವೇರಿ:ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯದ ಚಳಗೇರಿ ಹಾಗೂ ಕರೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ 8 ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಒಂದು ಟ್ರ್ಯಾಕ್ಟರ್, ಎರಡು ಬೈಕ್ ಹಾಗೂ ಎರಡು ಜನರೇಟರ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚಳಗೇರಿ ಹಾಗೂ ಕರೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಕಲ್ಲುಗಣಿಗಾರಿಕೆಯಲ್ಲಿ ತೊಡಗಿದ್ದ ಮುನೀರ್‌ಸಾಬ್ ಬೇಳಕೆರಿ, ಚಿತ್ರಪ್ಪ ಯಲಿಗಾರ, ಚಿಕ್ಕಪ್ಪ ತಾವರಗುಂದಿ, ನಾಗರಾಜ ತಾವರಗುಂದಿ, ರಾಜು ಸುರ್ವೆ, ಶಿವಾಜಪ್ಪ ನಸುನಾಯ್ಕರ್, ಶಾಂತಪ್ಪ ಹಳಿಯಪ್ಪನವರ, ಗುಡ್ಡಪ್ಪ ತರೇದಹಳ್ಳಿ ಎಂಬ ಆರೋಪಿಗಳನ್ನು ಬಂಧಿಸಿದ್ದು, ಕಲ್ಲುಗಣಿಗಾರಿಕೆಗೆ ಬಳಸುತ್ತಿದ್ದ ಒಂದು ಟ್ರ್ಯಾಕ್ಟರ್, ಎರಡು ಬೈಕ್ ಹಾಗೂ ಎರಡು ಜನರೇಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಹಾವೇರಿ ಪ್ರಾದೇಶಿಕ ಅರಣ್ಯ ವಿಭಾಗದ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್‌ಶೇಖ್ ಮಾರ್ಗದರ್ಶನದಲ್ಲಿ ರಾಣಿಬೆನ್ನೂರು ವನ್ಯಜೀವಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಪೂಜಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿ(ಪರೀಕ್ಷಾರ್ಥ) ಶ್ರೀನಿವಾಸ.ಆರ್, ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರೆಡ್ಡಿ ಮಂಕಣಿ, ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.