ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಸವಳು ಮಣ್ಣಿನ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಭೂ ಸಂಪತ್ತು ಲೂಟಿ ಹಾಡಹಗಲೇ ಅನೇಕ ವರ್ಷಗಳಿಂದ ನಡೆಯುತ್ತಿದೆ. ರಾಜ್ಯದ ಬೊಕ್ಕಸಕ್ಕೆ ಸೇರಬೇಕಾದ ರಾಯಲ್ಟಿ ಹಣ ಸಂದಾಯ ಆಗುತ್ತಿಲ್ಲ. ಜಿಲ್ಲಾ ಗಣಿ ಭೂವಿಜ್ಞಾನಿ ಇಲಾಖೆ ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತಿದೆ ಎಂದು ಜೆಡಿಎಸ್ ಮುಖಂಡ ಹಣಮಂತರಾವ ಪೂಜಾರಿ ಮತ್ತು ತಾಲೂಕು ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ದೂರಿದ್ದಾರೆ.ತಾಲೂಕಿನ ಕಿಷ್ಟಾಪೂರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಮಾರ್ಗವನ್ನು ಅತಿಕ್ರಮಣ ಮಾಡಿಕೊಂಡು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಿರಿಯಾಣ, ಕಿಷ್ಟಾಪೂರ, ಬೈರಂಪಳ್ಳಿ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ಕಲ್ಲುಗಣಿಗಾರಿಕೆ ಧಂದೆ ನಡೆಯುತ್ತಿದೆ ಸರಕಾರಿ ಜಮೀನು ಲೀಜ್ ಪಡೆದುಕೊಂಡು ನಂತರ ಜಮೀನು ಭೂ ಕಬಳಿಕೆ ನಡೆಯುತ್ತಿದೆ. ತಾಲೂಕು ಕಂದಾಯ ಇಲಾಖೆ ಮಾಹಿತಿ ಪ್ರಕಾರ ಕೇವಲ೨೦ ಜನರಿಗೆ ಮಾತ್ರ ಲೀಜ್ ನೀಡಿ ಪರವಾನಿಗೆ ನೀಡಲಾಗಿದೆ. ಅದು ಕೇವಲ ೨ಎಕರೆ ಮಾತ್ರವಷ್ಟೆ. ಆದರೆ ಲೀಜ್ ಪಡೆದ ಗಣಿ ಮಾಲೀಕರು ಬೇಕಾಬಿಟ್ಟಿಯಾಗಿ ಕಲ್ಲಿನ ವಹಿವಾಟು ನಡೆಸುತ್ತಿದ್ದರೂ ಕಂದಾಯ ಇಲಾಖೆ ಮಾತ್ರ ಯಾವುದೇ ಗಮನ ಹರಿಸುತ್ತಿಲ್ಲವೆಂದು ಆಪಾದಿಸಿದರು.ಕಿಷ್ಟಾಪೂರ, ಬೈರಂಪಳ್ಳಿ, ಮಿರಿಯಾಣ ಗ್ರಾಮದ ಅತಿ ಸಮೀಪದಲ್ಲಿಯೇ ಕುಂಚಾವರಂ ಅರಣ್ಯಪ್ರದೇಶವನ್ನು ವನ್ಯಜೀವಿಧಾಮ ಅರಣ್ಯಪ್ರದೇಶವೆಂದು ಘೋಷಣೆಮಾಡಿದೆ. ಕೇಂದ್ರ ಪರಿಸರ ಮಾಲಿನ್ಯ ಮತ್ತು ಅರಣ್ಯ ಇಲಾಖೆ ನಿಯಮಗಳು ಸಂಪೂರ್ಣವಾಗಿ ಉಲ್ಲಂಘನೆ ಆಗುತ್ತಿದೆ. ಕಲ್ಲುಗಣಿಯಲ್ಲಿ ಬ್ಲಾಸ್ಟಿಂಗ್‌ನಿಂದಾಗಿ ಮನೆಗಳಿಗೆ ಧಕ್ಕೆಯಾಗುತ್ತಿವೆ ಕಾಡು ಪ್ರಾಣಿಗಳಿಗೆ ಸಂಚಕಾರ ನಡೆಯುತ್ತಿವೆ ಗಣಿಕಲ್ಲು ಮಹಾರಾಷ್ಟ್ರ, ಲಾತೂರ, ಕಲಬುರಗಿ, ಬೀದರ್, ನಾಂದೇಡ, ಪರಭಣಿ, ಉಸ್ಮಾನಬಾದ, ತೆಲಂಗಾಣ ರಾಜ್ಯಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ದಿನನಿತ್ಯ ಲಾರಿಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ೨೦ ಜನರಿಗೆ ಲೀಜ್ ನೀಡಿದ್ದರೂ ಸಹಾ ಇಲ್ಲಿ ತೆಲಂಗಾಣ ರಾಜ್ಯದ ತಾಂಡೂರ, ಬಶಿರಾಬಾದ, ಮಲಕಾಪೂರ, ಸಂಗಾರೆಡ್ಡಿ, ವಿಕಾರಾಬಾದ ಗಣಿ ಮಾಲೀಕರೇ ಹೆಚ್ಚಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಹಣಮಂತ ಪೂಜಾರಿ ದೂರಿದರು.
ತಾಲೂಕಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಸವಳು ಮಣ್ಣಿನ ಧಂದೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ದಲ್ಲಿಸಿದ ನಂತರ ರಾಜ್ಯ ಗಣಿ ಮತ್ತು ಭೂ ವಿಜ್ಞಾ ನ ಇಲಾಖೆ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದು ಜೆಡಿಎಸ್ ಮುಖಂಡರಾದ ಹಣಮಂತ ಪೂಜಾರಿ, ರವಿಶಂಕರ ಮುತ್ತಂಗಿ ಹೇಳಿದರು.