ಸಾರಾಂಶ
ಕಾರ್ಯಾಚರಣೆ ವೇಳೆ 39.89 ಲೀ. ಬ್ಲ್ಯಾಕ್ ಡಾಗ್ ಸೇರಿದಂತೆ ಇತರ ಮದ್ಯ ಪತ್ತೆಯಾಗಿದೆ. ಅಕ್ರಮವಾಗಿ ಡಿಫೆನ್ಸ್, ಗೋವಾ ಮದ್ಯ ಪತ್ತೆ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ನ್ಯಾಟ್‌ಕಾಮ್ ಸಮಾವೇಶದಲ್ಲಿ ಅಕ್ರಮವಾಗಿ ಡಿಫೆನ್ಸ್ ಲಿಕ್ಕರ್ ಪೂರೈಕೆ ಆರೋಪ ಕೇಳಿಬಂದಿದ್ದು, ಅಬಕಾರಿ ಪೊಲೀಸರು ಕೇಸು ದಾಖಲಿಸಿದ್ದಾರೆ.ಅಬಕಾರಿ ಇಲಾಖೆಯಲ್ಲಿ ಕಠಿಣ ನಿಯಮವಿದ್ದರೂ ಅಕ್ರಮ ಡಿಫೆನ್ಸ್ (ರಕ್ಷಣಾ ಇಲಾಖೆ) ವಿಭಾಗ ಗೋವಾದಿಂದ ಮದ್ಯ ಅಕ್ರಮವಾಗಿ ಸರಬರಾಜು ಮಾಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಅಪಾರ ಮೊತ್ತ ವಂಚಿಸಿ ಮದ್ಯ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಿಂದ ಮಂಗಳೂರಲ್ಲಿ ಎರಡು ದಿನಗಳ ‘ನ್ಯಾಟ್‌ಕಾನ್’ ಸಮಾವೇಶ ಶನಿವಾರ ಸಮಾಪ್ತಿಗೊಂಡಿತ್ತು. ರಾತ್ರಿ ಪಾರ್ಟಿಗೆ ಆಯೋಜಕರು ಅಬಕಾರಿ ಇಲಾಖೆಯಿಂದ ಸಿಎಲ್-5(ಒಂದು ದಿನ) ಪರವಾನಗಿ ಪಡೆದಿದ್ದರು. ಆದರೆ ರಕ್ಷಣಾ (ಡಿಫೆನ್ಸ್) ಇಲಾಖೆ ಗೋವಾದಿಂದ ಮದ್ಯಗಳನ್ನು ಅಕ್ರಮವಾಗಿ ತಂದು ವಿತರಣೆ ಮಾಡಿತ್ತು. ಈ ವೇಳೆ ದಾಳಿ ನಡೆಸಿ ಅಬಕಾರಿ ಅಧಿಕಾರಿಗಳು ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ.ಕಾರ್ಯಾಚರಣೆ ವೇಳೆ 39.89 ಲೀ. ಬ್ಲ್ಯಾಕ್ ಡಾಗ್ ಸೇರಿದಂತೆ ಇತರ ಮದ್ಯ ಪತ್ತೆಯಾಗಿದೆ. ಅಕ್ರಮವಾಗಿ ಡಿಫೆನ್ಸ್, ಗೋವಾ ಮದ್ಯ ಪತ್ತೆ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ.
39.89 ಲೀ. ಡಿಫೆನ್ಸ್ ಮದ್ಯ, 19.14 ಲೀ. ಬಿಯರ್, 38 ಬ್ಲ್ಯಾಕ್ ಡಾಗ್ ಖಾಲಿ ಬಾಟಲಿ ಪತ್ತೆಯಾಗಿದೆ. ಡಿಫೆನ್ಸ್ ಮದ್ಯದಲ್ಲಿ ಬ್ಲ್ಯಾಕ್‌ಡಾಗ್ ಮತ್ತು ಟೀಚರ್ ಬ್ಯಾಂಡ್‌ಗಳು ಪತ್ತೆಯಾಗಿದ್ದಲ್ಲದೆ, ಗೋವಾದಿಂದ ತರಿಸಲಾದ ಬಕಾರ್ಡಿ ಬ್ಯಾಂಡ್ ಮದ್ಯ ಪತ್ತೆಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.