ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಕಡಿದು ತುಂಡುಗಳನ್ನು ಸಾಗಿಸುತಿದ್ದ ಟ್ರ್ಯಾಕ್ಟರ್ ಅನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಮಾಲು ಸಮೇತ ಟ್ರ್ಯಾಕ್ಟರ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಈ ಟ್ರ್ಯಾಕ್ಟರ್ ತಾಲೂಕಿನ ಮದಲಹಳ್ಳಿಯ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಕಡಿದು ತುಂಡುಗಳನ್ನು ಸಾಗಿಸುತಿದ್ದ ಟ್ರ್ಯಾಕ್ಟರ್ ಅನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಮಾಲು ಸಮೇತ ಟ್ರ್ಯಾಕ್ಟರ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಈ ಟ್ರ್ಯಾಕ್ಟರ್ ತಾಲೂಕಿನ ಮದಲಹಳ್ಳಿಯ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.ತಾಲೂಕಿನ ಕಾಚೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಕದ್ದು ಕೊಯ್ದಿದ್ದ ಅಪಾರ ಪ್ರಮಾಣದ ನೀಲಗಿರಿ ಮರದ ತುಂಡುಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುವ ವೇಳೆ ಬೆನ್ನತ್ತಿ ಬರುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಮರಗಳ್ಳರು ತಪ್ಪಿಸಿಕೊಳ್ಳಲಾಗದೆ ಕರಡಹಳ್ಳಿ ಸಮೀಪದ ಶ್ರೀಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಟ್ರಾಲಿಯ ಲಿಫ್ಟ್ ಎತ್ತಿ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.
ಕದ್ದು ಕೊಯ್ದಿದ್ದ ನೀಲಗಿರಿ ಮರದ ತುಂಡುಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿ ತೊಳಲಿ ಗ್ರಾಮದ ಮೂಲಕ ಕೋಟೆ ಬೆಟ್ಟ, ದೊಂದೆ ಮಾದಹಳ್ಳಿ ಮಾರ್ಗವಾಗಿ ಮಂಡ್ಯ ಮುಖ್ಯ ರಸ್ತೆ ಕಡೆಗೆ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಸಿಗುತ್ತಿದ್ದಂತೆ ತಾಲೂಕು ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಶನಿವಾರ ರಾತ್ರಿ 9,30ರ ಸಮಯದಲ್ಲಿ ದೇವಲಾಪುರ ಹ್ಯಾಂಡ್‌ಪೋಸ್ಟ್ ಮತ್ತು ಹುಳ್ಳೇನಹಳ್ಳಿ ಗೇಟ್‌ನಲ್ಲಿ ಕಾಯ್ದು ಕುಳಿತಿದ್ದರು.ಇದೇ ಮಾರ್ಗದಲ್ಲಿ ಬಂದ ಟ್ರ್ಯಾಕ್ಟರ್ ಮಂಡ್ಯ ಮುಖ್ಯ ರಸ್ತೆಯ ಬಸರಾಳು ಕಡೆಗೆ ಸಂಚರಿಸುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ತಡೆದು ನಿಲ್ಲಿಸಲು ಪ್ರಯತ್ನಿಸಿದರಾದರೂ ಚಾಲಕ ಟ್ರ್ಯಾಕ್ಟರ್ ನಿಲ್ಲಿಸದೆ ಅತಿವೇಗವಾಗಿ ಹೋಗುತ್ತಿದ್ದನು. ಅರಣ್ಯ ಪಾಲಕರು ಬೆನ್ನತ್ತಿರುವುದನ್ನು ಅರಿತ ಮರಗಳ್ಳರು ಹುಳ್ಳೇನಹಳ್ಳಿ ಚಿಕ್ಕಯಗಟಿ ನಡುವಿನ ಅರಣ್ಯ ಪ್ರದೇಶದ ರಸ್ತೆಯಲ್ಲಿ ತಿರುವು ಪಡೆದು ಚಿಕ್ಕಯಗಟಿ ಕೆರೆ ಸಮೀಪಕ್ಕೆ ತೆರಳಿದ್ದಾರೆ.
ಮುಂದೆ ದಾರಿ ಇಲ್ಲದ್ದನ್ನು ಕಂಡು ವಾಪಸ್ ಬರುವಷ್ಟರಲ್ಲಿ ಸಿನಿಮೀಯ ಶೈಲಿಯಲ್ಲಿ ಅರಣ್ಯ ಪಾಲಕರು ಹಿಂದೆ ಮುಂದೆ ಕಾಣಿಸಿಕೊಳ್ಳುತ್ತಿದ್ದಂತೆ ಕರಡಹಳ್ಳಿ ಸಮೀಪದ ಶ್ರೀಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಟ್ರಾಲಿಯ ಲಿಫ್ಟ್ ಎತ್ತಿ ಟ್ರ್ಯಾಕ್ಟರ್ ಬಿಟ್ಟು ಕಗ್ಗತ್ತಲಲ್ಲಿಯೇ ಮರಕಳ್ಳರು ಪರಾರಿಯಾದರು.ಟ್ರ್ಯಾಕ್ಟರ್‌ನ ಟ್ರಾಲಿಯ ಲಿಫ್ಟ್ ಎತ್ತುತ್ತಿದ್ದಂತೆ ಮರದ ತುಂಡುಗಳು ರಸ್ತೆಗೆ ಬೀಳತೊಡಗಿದವು. ಈ ವೇಳೆ ಹಿಂಬಾಲಿಸುತ್ತಿದ್ದ ಅರಣ್ಯ ಪಾಲಕರು ನಿಯಂತ್ರಣ ತಪ್ಪಿ ಬೈಕ್‌ಗಳ ಸಹಿತ ಕೆಳಗೆ ಬಿದ್ದರು. ಅಷ್ಟರೊಳಗೆ ಸುತ್ತುವರಿದ ಮತ್ತಷ್ಟು ಸಿಬ್ಬಂದಿ ಹುಡುಕಾಟ ನಡೆಸಿದರೂ ಕೂಡ ಚಾಲಕ ಸೇರಿದಂತೆ ಟ್ರ್ಯಾಕ್ಟರ್‌ನಲ್ಲಿದ್ದ ಕಳ್ಳರ ಸುಳಿವು ಸಿಗಲಿಲ್ಲ.
ತಕ್ಷಣ ಮತ್ತಷ್ಟು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ರಸ್ತೆಯಲ್ಲಿ ಬಿದ್ದದ್ದ ನೀಲಗಿರಿ ಮರದ ತುಂಡುಗಳನ್ನು ಅದೇ ಟ್ರ್ಯಾಕ್ಟರ್‌ಗೆ ತುಂಬಿ ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿ ಆವರಣಕ್ಕೆ ತಂದು ನಿಲ್ಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಟ್ರ್ಯಾಕ್ಟರ್ ಇಂಜನ್ ಮತ್ತು ಚಾರ್ಸಿ ನಂಬರ್‌ನ ಆಧಾರದ ಮೇಲೆ ಟ್ರ್ಯಾಕ್ಟರ್ ಮಾಲೀಕ ತಾಲೂಕಿನ ಮದಲಹಳ್ಳಿ ಹರೀಶ್ ಮತ್ತು ಚಾಲಕ ಸಿದ್ದಲಿಂಗಮೂರ್ತಿ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 71ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಉಪ ಅರಣ್ಯಾಧಿಕಾರಿ ಕೆ.ಆರ್.ಮಂಜು, ಶಿವಲಿಂಗಯ್ಯ, ಗಸ್ತು ಅರಣ್ಯಪಾಲಕರಾದ ಪ್ರಜ್ವಲ್, ಸಚ್ಚಿನ್, ಶಿವರಾಜು, ನೂರ್‌ಪಾಷ, ಅರಣ್ಯ ವೀಕ್ಷಕ ಹೃತ್ವಿಕ್ ಕರ್ತವ್ಯ ನಿರ್ವಹಿಸಿದ್ದರು.