ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಸಕ್ಕರೆ ಕಾರ್ಖಾನೆಗೆ ಸೇರಿದ ೨೮ ಎಕರೆ ಪ್ರದೇಶವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಅನುಭೋಗದಲ್ಲಿದ್ದಾರೆ ಎಂದು ಕಂಪನಿಯ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಒತ್ತುವರಿಯಾಗಿರುವ ಜಾಗದಲ್ಲಿ ೭.೧೦ ಎಕರೆ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೆ ೨೦.೨೯ ಎಕರೆ ಪ್ರದೇಶದಲ್ಲಿ ವ್ಯವಸಾಯ ಚಟುವಟಿಕೆ ನಡೆಸಲಾಗುತ್ತಿದೆ. ಖಾಸಗಿಯವರು ಹಲವಾರು ದಶಕಗಳಿಂದ ಅಕ್ರಮ ಅನುಭೋಗದಲ್ಲಿದ್ದು, ಜಮೀನಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಅವರ ಬಳಿ ಇರುವುದಿಲ್ಲ. ಹಾಗಾಗಿ ಅವರಾಗಿಯೇ ಜಾಗವನ್ನು ತೆರವುಗೊಳಿಸುವುದು. ಇಲ್ಲವೇ, ಕಾರ್ಖಾನೆ ಆಡಳಿತ ಮಂಡಳಿ ನಿಗದಿಪಡಿಸುವ ಗೇಣಿಯನ್ನು ಪಾವತಿಸಿ ಅನುಭವದಲ್ಲಿ ಉಳಿಯಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಸರ್ವೇ ನಂ.೮೪೦ರಲ್ಲಿ ಕಾಳಿಕಾಂಬ ಟ್ರಸ್ಟ್ ೨೦ ಗುಂಟೆ, ೨.೧೭ ಎಕರೆ ಪ್ರದೇಶದಲ್ಲಿ ಹೊನ್ನಯ್ಯ ಬಡಾವಣೆ, ಸರ್ವೇ ನಂ.೧೫೯ರ ೨ ಎಕರೆಯಲ್ಲಿ ತಗ್ಗಹಳ್ಳಿ ಜಯರಾಮು, ಸರ್ವೇ ನಂ. ೧೩೩ರ ೩.೦೪ ಎಕರೆಯಲ್ಲಿ ಎಚ್.ಕೋಡಿಹಳ್ಳಿ ಗ್ರಾಮದ ಕುಚೇಲ ಮತ್ತು ಇತರರು, ಸರ್ವೇ ನಂ ೧೩೪ರಲ್ಲಿ ೩೮ ಗುಂಟೆ, ೧೩೫ರಲ್ಲಿ ೨.೧೬ ಎಕರೆ, ೧೩೬ರಲ್ಲಿ ೪.೦೩ ಎಕರೆಯಲ್ಲಿ ಶಿವಳ್ಳಿ ಕೃಷ್ಣ ಮತ್ತು ಇತರರು, ಮಂಡ್ಯ ತಾಲೂಕು ಭೀಮನಹಳ್ಳಿಯ ೩೬/ಪಿ೧೯ರ ೬ ಎಕರೆಯಲ್ಲಿ ಚನ್ನಮ್ಮ ಮತ್ತು ಇತರರು, ೩೬/ಪಿ೧೮ರ ೧.೧೦ ಎಕರೆಯಲ್ಲಿ ರಾಜಿ, ಮರಿಯಯ್ಯ, ಸಂಪಹಳ್ಳಿಯ ಸರ್ವೇ ನಂ.೧೨೪ರ ೧೫ ಗುಂಟೆಯಲ್ಲಿ ಕುಮಾರ, ಹೊಳಲು ಗ್ರಾಪಂ ಮಾಜಿ ಅಧ್ಯಕ್ಷೆ ನಿಂಗಾಜಮ್ಮ ಸರ್ವೇ ನಂ. ೧೨೫ರ ೧೦ ಗುಂಟೆಯಲ್ಲಿ, ಎಚ್.ಕೋಡಹಳ್ಳಿ ಸರ್ವೇ ನಂ.೨೦೨ರ ೧೩ ಗುಂಟೆಯಲ್ಲಿ ಚಿಕ್ಕತಾಯಮ್ಮ ಸೇರಿದಂತೆ ಇತರರು ಅಕ್ರಮ ಅನುಭವದಲ್ಲಿದ್ದಾರೆ ಎಂದರು.ಕಂಪನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಖಾನೆಯ ಆಸ್ತಿ ಸಂರಕ್ಷಣೆ ಉದ್ದೇಶದಿಂದ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸರ್ವೇ ನಡೆಸಿದ ಪರಿಣಾಮ ೨೮ ಗುಂಟೆ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಅನುಭವದಲ್ಲಿರುವವರಿಗೆ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸುವಂತೆ ಕೇಳಿದಾಗ ಯಾರೂ ಇದುವರೆಗೂ ಒದಗಿಸಿಲ್ಲ. ಈಗಲೂ ಅವರಿಗೆ ಅವಕಾಶ ನೀಡಲಾಗುತ್ತಿದ್ದು, ಕಾನೂನು ಬದ್ಧ ದಾಖಲೆಗಳಿದ್ದು ಅವುಗಳನ್ನು ಒದಗಿಸಿದಲ್ಲಿ ಜಮೀನನ್ನು ಅವರ ಹೆಸರಿಗೆ ನೋಂದಣಿ ಮಾಡಿಸಲಾಗುವುದು ಎಂದರು.
ಯಾವುದೇ ನೋಟಿಸ್ ಇಲ್ಲ:ಮೈಷುಗರ್ ಕಾರ್ಖಾನೆ ಆಸ್ತಿ ಒತ್ತುವರಿಯಾಗಿರುವುದು ವಿಧಾನ ಸಭೆಯಲ್ಲೂ ಚರ್ಚೆಯಾಗಿದೆ. ಅದಕ್ಕೂ ಮುನ್ನವೇ ನಾವು ಒತ್ತುವರಿಯಾಗಿರುವ ಭೂಮಿಯ ಸರ್ವೇ ಕಾರ್ಯ ನಡೆಸಿ ಮುಗಿಸಿದ್ದು, ಅದರಂತೆ ಒತ್ತುವರಿ ಜಮೀನಿನ ತೆರವಿಗೆ ಕ್ರಮ ವಹಿಸಿದ್ದೇವೆ. ಅನುಭವದಾರರು ಅವರಾಗಿಯೇ ಜಮೀನನ್ನು ತೆರವುಗೊಳಿಸುವುದು ಅಥವಾ ಕಾರ್ಖಾನೆ ಆಡಳಿತ ಮಂಡಳಿ ನಿಗದಿಪಡಿಸುವ ಗೇಣಿಯನ್ನು ಒಪ್ಪಿಕೊಂಡು ಪಾವತಿಸತಕ್ಕದ್ದು. ಈ ಒತ್ತುವರಿ ತೆರವಿಗೆ ಯಾವುದೇ ನೋಟಿಸ್‌ನ್ನು ಜಾರಿಗೊಳಿಸುವುದಿಲ್ಲ ಎಂದರು.
ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಕಾರ್ಖಾನೆ ಆಸ್ತಿ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುವುದು ಒಂದು ಗುಂಟೆ ಜಮೀನು ಕಬಳಿಕೆಯಾಗಲು ಬಿಡುವುದಿಲ್ಲ. ಒಮ್ಮೆ ಜಮೀನು ತೆರವಿಗೆ ಹಿಂದೇಟು ಹಾಕಿದರೆ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ವಿಜಯಕುಮಾರ್, ರಾಮಕೃಷ್ಣ, ಬೋರೇಗೌಡ, ಎಚ್.ವಿ.ನಾಗರಾಜು, ಉದಯಕುಮಾರ್, ದ್ಯಾವಣ್ಣ ಇತರರಿದ್ದರು.ಎಚ್‌ಡಿಕೆಗೆ ಪತ್ರ ಬರೆಯುತ್ತೇವೆ
ಮೈಷುಗರ್ ಪ್ರೌಢಶಾಲೆಯ ಶಿಕ್ಷಕರ ವೇತನ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಮೂಲಕ ಗಮನಸೆಳೆಯಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.ಶಿಕ್ಷಕರ ವೇತನಕ್ಕೆ ಅಗತ್ಯವಿರುವಷ್ಟು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವುದಾಗಿ ಮಂಡ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಹೇಳಿದ್ದರು. ಅದರಂತೆ ಹಣ ನೀಡುವ ಕುರಿತಂತೆ ಪತ್ರ ಬರೆದು ಗಮನಸೆಳೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಹಣ ಬಿಡುಗಡೆ ಮಾಡುವುದಕ್ಕೆ ಸದ್ಯಕ್ಕೆ ಕಾರ್ಖಾನೆ ಬಳಿ ಹಣವಿಲ್ಲ. ಹಾಗಾಗಿ ಸಂಬಳ ಪಾವತಿಸಿಲ್ಲ. ಶಿಕ್ಷಕರಿಗೂ ಅದನ್ನೇ ತಿಳಿಸಿರುವುದಾಗಿ ಹೇಳಿದರು.೨೫ ಸಾವಿರ ಕ್ವಿಂಟಾಲ್ ಸಕ್ಕರೆ ಮಾರಾಟಕ್ಕೆ ಅನುಮತಿಮೈಷುಗರ್ ಕಾರ್ಖಾನೆಯಲ್ಲಿ ಹಾಲಿ ೪೦ ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನಿದ್ದು, ಅದರಲ್ಲಿ ೨೫ ಸಾವಿರ ಕ್ವಿಂಟಾಲ್ ಸಕ್ಕರೆ ಮಾರಾಟಕ್ಕೆ ಕೇಂದ್ರದಿಂದ ಅನುಮತಿ ಪಡೆಯಲಾಗಿದೆ ಎಂದು ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸಾಮಾನ್ಯವಾಗಿ ೩ ಸಾವಿರ ಕ್ವಿಂಟಾಲ್ ಮಾರಾಟಕ್ಕೆ ಮಾತ್ರ ಕೇಂದ್ರ ಅನುಮತಿ ನೀಡುತ್ತಿತ್ತು. ಆದರೆ, ದೆಹಲಿಗೆ ತೆರಳಿ ಕೇಂದ್ರ ಸಕ್ಕರೆ ಸಚಿವರೊಂದಿಗೆ ಮಾತುಕತೆ ನಡೆಸಿ ರೈತರಿಗೆ ಕಬ್ಬಿನ ಹಣ ಪಾವತಿಸುವ ಬಗ್ಗೆ ಗಮನಸೆಳೆದಾಗ ೨೫ ಸಾವಿರ ಕ್ವಿಂಟಾಲ್ ಸಕ್ಕರೆ ಮಾರಾಟಕ್ಕೆ ಸಮ್ಮತಿ ಸೂಚಿಸಿದರು. ಅದರಂತೆ ಸಕ್ಕರೆ ಮಾರಾಟಕ್ಕೆ ಟೆಂಡರ್ ಕರೆಯಲಾಗಿದೆ. ಮಾರಾಟದಿಂದ ಬಂದ ಹಣದಿಂದ ರೈತರ ಕಬ್ಬಿನ ಹಣದ ಬಾಕಿಯನ್ನು ಸೆ.೩೦ರಿಂದ ಪಾವತಿಸಲಾಗುವುದು ಎಂದರು.ಅಂತಿಮ ಹಂತದಲ್ಲಿ ನಾಗರಾಜಪ್ಪ ಪ್ರಕರಣಕಾರ್ಖಾನೆ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಗುರಿಯಾಗಿರುವ ಮಾಜಿ ಅಧ್ಯಕ್ಷ ವಿ.ನಾಗರಾಜಪ್ಪ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಹಣ ದುರುಪಯೋಗ ಸಂಬಂಧ ನಾಗರಾಜಪ್ಪ ಅವರಿಂದ ೧೨೦ ಕೋಟಿ ರು. ವಸೂಲಿ ಮಾಡಲು ಲೋಕಾಯುಕ್ತ ವರದಿ ನೀಡಿತ್ತು. ಈ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ಪ್ರಕರಣದ ವಿಚಾರಣೆ ಆ.೧೯ರಂದು ನಡೆದು ನಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಾಲಯದಲ್ಲಿ ಜಯ ಸಿಗುವ ವಿಶ್ವಾಸವಿದೆ. ಆನಂತರ ನಾಗರಾಜಪ್ಪ ಅವರ ಆಸ್ತಿ ಮುಟ್ಟುಗೋಲಿಗೆ ಕ್ರಮ ವಹಿಸುವುದಾಗಿ ಸಿ.ಡಿ.ಗಂಗಾಧರ್ ತಿಳಿಸಿದರು.