ಕುಡಿಯುವ ನೀರನ್ನು ಅಕ್ರಮವಾಗಿ ತೋಟಕ್ಕೆ ಬಳಕೆ

| Published : May 13 2024, 12:04 AM IST

ಸಾರಾಂಶ

ತಾಲೂಕಿನಲ್ಲಿ ಬರಗಾಲದಿಂದ ಕುಡಿಯುವ ನೀರಿಗೂ ಪರಿತಪಿಸುವ ಸಂದರ್ಭದಲ್ಲಿ ಸಾರ್ವಜನಿಕರು ಬಳಕೆ ಮಾಡುವ ನೀರನ್ನು ಬೆಂಗಳೂರು ಮೂಲದ ವ್ಯಕ್ತಿಯಿಂದ ಅಕ್ರಮವಾಗಿ ನೀರಿನ ಸಂಪರ್ಕ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಕನ್ನಡಪ್ರಭವಾರ್ತೆ ಕೊರಟಗೆರೆ

ತಾಲೂಕಿನಲ್ಲಿ ಬರಗಾಲದಿಂದ ಕುಡಿಯುವ ನೀರಿಗೂ ಪರಿತಪಿಸುವ ಸಂದರ್ಭದಲ್ಲಿ ಸಾರ್ವಜನಿಕರು ಬಳಕೆ ಮಾಡುವ ನೀರನ್ನು ಬೆಂಗಳೂರು ಮೂಲದ ವ್ಯಕ್ತಿಯಿಂದ ಅಕ್ರಮವಾಗಿ ನೀರಿನ ಸಂಪರ್ಕ ಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಹಂಚಿಹಳ್ಳಿ ಗ್ರಾಪಂ ಮುಖ್ಯ ರಸ್ತೆಯಲ್ಲಿರುವ ಮರಿಯಪ್ಪ ಎಂಬುವವರ ತೋಟಕ್ಕೆ ಹಂಚಿಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿನ ಬಳಕೆ ಮಾಡುವ ಪೈಪ್ ಲೈನ್ ಸಂಪರ್ಕದ ೨ ಇಂಚು ನೀರನ್ನು ಅಕ್ರಮವಾಗಿ ಸುಮಾರು ವರ್ಷಗಳಿಂದ ತೋಟಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.ಈಗಾಗಲೇ ಹಂಚಿಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿರಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ನಾಗೇನಹಳ್ಳಿ ಸಮೀಪ ಇರುವ ಬೋರ್‌ವೆಲ್‌ನಿಂದ ಜಲಜೀವನ್ ಮಿಷನ್‌ ವತಿಯಿಂದ ಹಂಚಿಹಳ್ಳಿ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿತ್ತು. ಗ್ರಾಮದಲ್ಲಿರುವ ಓವರ್ ಟ್ಯಾಂಕ್‌ಗೆ ನೀರು ತುಂಬಲು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನೀರಿನ ನಿರ್ವಹಣೆ ಮಾಡಬೇಕಾದ ಗ್ರಾಪಂ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿ ನೀರು ಬಳಕೆ ಮಾಡುತ್ತಿದ್ದರೂ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.ನರ್ಸರಿಗೂ ಗ್ರಾಪಂ ನೀರು ಬಳಕೆ: ಈಗಾಗಲೇ ಹಂಚಿಹಳ್ಳಿ ಗ್ರಾಪಂಯಲ್ಲಿ ಖಾಸಗಿ ವ್ಯಕ್ತಿ ತನ್ನ ತೋಟಕ್ಕೆ ಸಾರ್ವಜನಿಕರ ನೀರನ್ನು ಬಳಕೆ ಮಾಡುತ್ತಿದ್ದು, ದೊಡ್ಡಮಲ್ಲಯ್ಯನಪಾಳ್ಯ ಗ್ರಾಮದ ಸಮೀಪ ನರ್ಸರಿಯಲ್ಲಿ ಸಸಿ ಬೆಳಸಲು ಇದೆ ಗ್ರಾಪಂ ನೀರನ್ನು ಬಳಕೆ ಮಾಡುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಮೌನವಾಗಿದ್ದಾರೆ. ಇವರ ಮೇಲೆ ಕ್ರಮ ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ: ತಾಲೂಕಿನಲ್ಲಿ ಬರಗಾಲದಿಂದ ಕುಡಿಯುವ ನೀರಿಗೆ ತುಂಬಾ ಹಾಹಾಕಾರ ಉಂಟಾಗಿದ್ದು, ಜಿಲ್ಲಾಡಳಿತ ನೀರಿನ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದ್ದಾರೆ. ಅದರೆ ಬೆಂಗಳೂರು ಮೂಲದ ವ್ಯಕ್ತಿ ತಮ್ಮ ತೋಟಕ್ಕೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿದ್ದಾರೆ ಎಂದು ಗ್ರಾಪಂ ಗಮನಕ್ಕೆ ಬಂದ ಮೇಲೆ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಕೊರಟಗೆರೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ನೀರಿಲ್ಲದೆ ಗುಳೆ ಹೋಗಬೇಕಾದ ಪ್ರಸಂಗ: ತಾಲೂಕಿನಲ್ಲಿ ಬರಗಾಲ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಹನಿ ನೀರಿಗೂ ಪರಿತಪಿಸುವ ಸಾರ್ವಜನಿಕರು ನೀರಿಲ್ಲದೆ ಗುಳೆ ಹೋಗಬೇಕಾದ ಪ್ರಸಂಗಗಳ ಬರುತ್ತಿದ್ದರೂ ಇಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ವ್ಯಕ್ತಿ ಹಾಗೂ ನರ್ಸರಿಯ ಮಾಲೀಕರ ವಿರುದ್ದ ಗ್ರಾಪಂ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ.ಹಂಚಿಹಳ್ಳಿ ಗ್ರಾಮದಲ್ಲಿ ನಾಲ್ಕು ಬೋರ್‌ವೆಲ್ ಇದ್ದು, ಒಂದು ಬೋರ್‌ನಲ್ಲಿ ಮಾತ್ರ ನೀರು ಬರುತ್ತಿದ್ದು, ನಾಗೇನಹಳ್ಳಿ ಗ್ರಾಮದಿಂದ ಪೈಪ್ ಮಾಡಿ ನೀರು ಪೂರೈಕೆ ಮಾಡಲಾಗಿತ್ತು. ಒವರ್ ಟ್ಯಾಂಕ್‌ಗೆ ನೀರು ಬಿಟ್ಟಾಗ ನೀರು ಬರದೆ ಇದ್ದಾಗ ಪರಿಶೀಲನೆ ಮಾಡಿದಾಗ ಮರಿಯಪ್ಪ ಎಂಬುವವರ ತೋಟಕ್ಕೆ ನೀರು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.-ಭೀಮರಾಜು ಹಂಚಿಹಳ್ಳಿ ಗ್ರಾಪಂ ಅಧ್ಯಕ್ಷ.

ಹಂಚಿಹಳ್ಳಿ ಗ್ರಾಮಕ್ಕೆ ಸುಮಾರು ಒಂದು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿತ್ತು. ನೀರು ಎಲ್ಲಿಗೆ ಹೋಗುತ್ತಿದೆ ಎಂದು ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಖಾಸಗಿ ವ್ಯಕ್ತಿಯ ತೋಟಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳಿಗೆ ಗಮನ ತಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.-ರಮೇಶ್, ಪಿಡಿಒ ಹಂಚಿಹಳ್ಳಿ ಗ್ರಾಪಂ.