ನಮ್ಮ ಆರೋಗ್ಯ ಮತ್ತು ಅನಾರೋಗ್ಯಕ್ಕೆ ಶರೀರವನ್ನು ಪ್ರತಿನಿಧಿಸುವ ವಾತ, ಪಿತ್ತ, ಕಫಗಳೆಂಬ ಅಂಶಗಳ ಸಾಮ್ಯಾವಸ್ಥೆ ಹಾಗೂ ವಿಷಮಾವಸ್ಥೆಯೇ ಪ್ರಮುಖ ಕಾರಣ.
ಗದಗ: ಆಯುರ್ವೇದದ ಪ್ರಕಾರ ರೋಗಗಳು ಉಂಟಾಗಲು ಆಹಾರ ಪದ್ಧತಿ ಹಾಗೂ ದೈನಂದಿನ ಹವ್ಯಾಸಗಳೇ ಮುಖ್ಯ ಕಾರಣವಾಗಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ನಿಯಮಿತ ಹಾಗೂ ಸಮುಚಿತ ಆಹಾರ ಕ್ರಮದಿಂದ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದಾ ತಿಗಳೇರಿ ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಬೆಟಗೇರಿಯ ಶಿವರತ್ನ ವೃದ್ಧಾಶ್ರಮದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಆರೋಗ್ಯ ಮತ್ತು ಅನಾರೋಗ್ಯಕ್ಕೆ ಶರೀರವನ್ನು ಪ್ರತಿನಿಧಿಸುವ ವಾತ, ಪಿತ್ತ, ಕಫಗಳೆಂಬ ಅಂಶಗಳ ಸಾಮ್ಯಾವಸ್ಥೆ ಹಾಗೂ ವಿಷಮಾವಸ್ಥೆಯೇ ಪ್ರಮುಖ ಕಾರಣ. ಆಹಾರ ಮತ್ತು ವಿಹಾರಗಳು ಹದ ತಪ್ಪಿದಾಗ ಅನಾರೋಗ್ಯ ಉಂಟಾಗುತ್ತದೆ ಎಂದ ಅವರು, ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂ. 20ರಂದು ಬೆಳಗ್ಗೆ 9ಕ್ಕೆ ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಯೋಗ ಜಾಥಾ ಪ್ರಾರಂಭವಾಗಲಿದೆ. ಗಾಂಧಿ ಸರ್ಕಲ್, ರೋಟರಿ ಸರ್ಕಲ್, ಹಳೆ ಬಸ್ ನಿಲ್ದಾಣ, ಟಾಂಗಾ ಕೂಟ, ಮಹೇಂದ್ರಕರ್ ಸರ್ಕಲ್, ಶಹಪೂರ ಪೇಟೆ ಮಾರ್ಗವಾಗಿ ಸಾಗಿ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಜೂ. 21ರಂದು ಬೆಳಗ್ಗೆ 6.30ಕ್ಕೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ನಗರಸಭೆ, ಜಿಲ್ಲೆಯ ಯೋಗ ಸಂಸ್ಥೆಗಳು, ಆಯುರ್ವೇದ ಹಾಗೂ ನರ್ಸಿಂಗ್ ಮಹಾವಿದ್ಯಾಲಯ, ಹುಲಕೋಟಿಯ ಪ್ರಕೃತಿ ಚಿಕಿತ್ಸಾ ಕೇಂದ್ರ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ನೆಹರು ಯುವ ಕೇಂದ್ರ, ಬ್ರಹ್ಮಕುಮಾರಿ ಸಂಸ್ಥೆ ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಈ ವೇಳೆ ಸ್ಥಳೀಯ ಮುಖಂಡರು, ಆಶ್ರಮದ ಸಿಬ್ಬಂದಿ ಇದ್ದರು.