ಕ್ರೀಡಾಕೂಟದ ಪ್ರಮಾಣ ಪತ್ರದಲ್ಲಿ ಯೇಸು, ಮೇರಿ ಚಿತ್ರ

| Published : Aug 29 2024, 12:57 AM IST

ಸಾರಾಂಶ

ಸರ್ಕಾರಿ ಕ್ರೀಡಾಕೂಟದ ಪ್ರಮಾಣ ಪತ್ರದಲ್ಲಿ ಯೇಸು, ಮೇರಿಯ ಭಾವಚಿತ್ರ ಮುದ್ರಿಸುವ ಮೂಲಕ ಚಾಮರಾಜನಗರ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಚಾಮರಾಜನಗರ: ಸರ್ಕಾರಿ ಕ್ರೀಡಾಕೂಟದ ಪ್ರಮಾಣ ಪತ್ರದಲ್ಲಿ ಯೇಸು, ಮೇರಿಯ ಭಾವಚಿತ್ರ ಮುದ್ರಿಸುವ ಮೂಲಕ ಚಾಮರಾಜನಗರ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಇತ್ತೀಚೆಗೆ ಹನೂರಿನಲ್ಲಿ ತಾಲೂಕು ಮಟ್ಟದ ಪ.ಪೂ.ಕಾಲೇಜುಗಳ ಕ್ರೀಡಾಕೂಟ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ), ಹನೂರಿನ ಕ್ರಿಸ್ತರಾಜ ಪಪೂ ಕಾಲೇಜು ಹಾಗೂ ಮಾರ್ಟಳ್ಳಿಯ ಸೇಂಟ್ ಮೇರಿಸ್ ಸಂಯುಕ್ತ ಪ.ಪೂ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ವಿತರಿಸಲಾದ ಪ್ರಶಸ್ತಿ ಪತ್ರದಲ್ಲಿ ಯೇಸು, ಮೇರಿಯ ಭಾವಚಿತ್ರ ಮುದ್ರಣ ಮಾಡಲಾಗಿದೆ.

ಗಣೇಶ, ಸರಸ್ವತಿ ಪೂಜೆ ಮಾಡಿದರೆ ಕೋಮುವಾದ ಅನ್ನುವವರಿಗೆ ಇದು ಕಾಣಿಸುವುದಿಲ್ಲವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಎಕ್ಸ್‌ನಲ್ಲಿ ನೆಟ್ಟಿಗರ ಆಕ್ರೋಶ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜನೆ ಆಗಿದ್ದ ಕ್ರೀಡಾಕೂಟದದಲ್ಲಿ ದೊಡ್ಡ ಎಡವಟ್ಟು ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದಿದ್ದ ಹನೂರು ತಾಲೂಕು ಮಟ್ಟದ ಪಿ.ಯು ಕಾಲೇಜುಗಳ ಕ್ರೀಡಾಕೂಟದಲ್ಲಿ ವಿತರಿಸಿದ್ದ ಪ್ರಮಾಣ ಪತ್ರದಲ್ಲಿ ಏಸು ಮತ್ತು ಮೇರಿ ಚಿತ್ರ ಇದ್ದು ನೆಟ್ಟಿಗರು ಕಿಡಿಕಾರಿದ್ದಾರೆ.

ಹಿಂದೂ ಕಾರ್ಯಕರ್ತ ಗಿರೀಶ್ ಭಾರಧ್ವಜ್ ಎಂಬುವರು ತಮ್ಮ ಎಕ್ಸ್‌ನಲ್ಲಿ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಶಾಲೆಗಳಲ್ಲಿ ಸರಸ್ವತಿ ಪೂಜೆ ಮಾಡಲು ಸಮಸ್ಯೆ ಕಾಣುತ್ತದೆ. ಆದರೆ ಏಸು ಕ್ರಿಸ್ತನ ಫೋಟೋ ಸಂಬಂಧ ಯಾವುದೇ ಸಮಸ್ಯೆ ಕಾಣಲ್ಲ ಎಂದು ಕಿಡಿಕಾರಿದ್ದಾರೆ. ಸದ್ಯ, ಈ ಟ್ವೀಟ್ ಅನ್ನು 85 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದು ತರಹೇವಾರಿಯಾಗಿ ಪ್ರತಿಕ್ರಿಯೆ ಕೊಟ್ಟು ಕಿಡಿಕಾರಿದ್ದಾರೆ.

ಸರ್ಕಾರಿ ಕ್ರೀಡಾಕೂಟದ ಸರ್ಟಿಫಿಕೆಟ್‌ನಲ್ಲಿ ಮೇರಿ ಮಾತೆ ಏಸು ಕ್ರಿಸ್ತರ ಫೋಟೊ ಬಳಸಿದ ಬಗ್ಗೆ ತಿ‍ಳಿದು ಬಂದಿದ್ದು, 700 ಸರ್ಟಿಫಿಕೆಟ್‌ಗೆ ಸಹಿ ಮಾಡುವ ಜವಾಬ್ದಾರಿ ನನ್ನದು. ಈ ಹಿನ್ನೆಲೆ ಹಿಂದೆ ನನ್ನ ಸಹಿ ಸ್ಕ್ಯಾನ್ ಮಾಡಿ ವಾಟ್ಸಪ್‌ನಲ್ಲಿ ಕಳುಹಿಸಿದ್ದೆ. ನನ್ನ ಗಮನಕ್ಕೆ ಬಾರದೆ ನನ್ನ ಸಹಿ ಹಾಕಲಾಗಿದೆ. ಈಗಾಗಲೇ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದೇವೆ. ವಿತರಣೆಯಾದ ಎಲ್ಲ ಪ್ರಮಾಣ ಪತ್ರವನ್ನು ಹಿಂಪಡೆದಿದ್ದೇವೆ. ಬೇರೆ ಪ್ರಮಾಣ ಪತ್ರವನ್ನು ನಾವು ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಿದ್ದೇನೆ.

- ಮಂಜುನಾಥ ಪ್ರಸನ್ನ, ಉಪ ನಿರ್ದೇಶಕ, ಪಪೂ ಶಿಕ್ಷಣ ಇಲಾಖೆ