ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉದಯೋನ್ಮುಖ ವೃತ್ತಿ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ‘ವಿಂಗ್ಸ್ ಆಫ್ ಅಪರ್ಚುನಿಟಿ– ವಿಮಾನಯಾನ ವೃತ್ತಿ ಮಾರ್ಗದರ್ಶನ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಥ್ರಸ್ಟ್ ಅಕಾಡೆಮಿ ಸಂಸ್ಥಾಪಕ ಕಾರ್ತಿಕ್ ಆಳ್ವ ಅವರು ವಿಮಾನ ಯಾನ ಕ್ಷೇತ್ರದಲ್ಲಿ ಲಭ್ಯವಿರುವ ವಿವಿಧ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.ವಿಮಾನ ಯಾನ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಲು ಬೇಕಾದ ಅರ್ಹತೆಗಳು, ಅಗತ್ಯ ಕೌಶಲ್ಯಗಳು, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ ಮತ್ತು ಸೇವಾ ಕ್ಷೇತ್ರದಲ್ಲಿ ವೃತ್ತಿಪರತೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಜೊತೆಗೆ ಈ ಕ್ಷೇತ್ರದಲ್ಲಿ ಬೆಳೆಯಲು ಇರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆಯೂ ಚರ್ಚಿಸಿದರು. ಬಿಕಾಂ, ಬಿಬಿಎ ಮತ್ತು ಬಿಸಿಎ ವಿಭಾಗಗಳ ಎಲ್ಲ ವರ್ಷದ ಆಸಕ್ತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ಸಕ್ರಿಯವಾಗಿ ಸಂವಾದ ನಡೆಸಿ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು.ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ವಿಮಾನಯಾನ ಕ್ಷೇತ್ರದ ಬಗ್ಗೆ ಸಮಗ್ರ ತಿಳುವಳಿಕೆ ನೀಡುವುದರೊಂದಿಗೆ, ಭವಿಷ್ಯದಲ್ಲಿ ಈ ಕ್ರಿಯಾತ್ಮಕ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಪ್ರೇರಣೆ ನೀಡಿತು.
‘ದೀಕ್ಷಾರಂಭ ವಾರ’ದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿ ಬಗ್ಗೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಯಿತು.