ಮೀಸಲು ಕ್ಷೇತ್ರದಲ್ಲಿ ಭೋವಿಗಳ ಕಡೆಗಣನೆಗೆ ಆಕ್ರೊಶ

| Published : Mar 23 2024, 01:00 AM IST

ಮೀಸಲು ಕ್ಷೇತ್ರದಲ್ಲಿ ಭೋವಿಗಳ ಕಡೆಗಣನೆಗೆ ಆಕ್ರೊಶ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ 5 ಲೋಕಸಭಾ ಕ್ಷೇತ್ರಗಳಲ್ಲಿ ಭೋವಿ ಸಮುದಾಯದ ವ್ಯಕ್ತಿಗಳಿಗೆ ಟಿಕೇಟ್ ನೀಡಲು ನಿರಾಸಕ್ತಿ ತೋರಲಾಗಿದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಲೋಕಸಭೆ ಚುನಾವಣೆಯಲ್ಲಿ ಪರಿಶಿಷ್ಟ ಮೀಸಲು ಕ್ಷೇತ್ರದಲ್ಲಿ ಭೋವಿ ಸಮಾಜವ ಕಡೆಗಣಿಸಿರುವ ರಾಷ್ಟ್ರೀಯ ಪಕ್ಷಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಸಮಾಜದ ಅಭ್ಯರ್ಥಿಳಿಗೆ ಟಿಕೆಟ್ ಕೊಡದಿದ್ದರೆ ಇನ್ನೆರೆಡು ದಿನಗಳಲ್ಲಿ ಮುಂದಿನ ನಡೆ ಪ್ರಕಟಿಸುವುದಾಗಿ ಹೇಳಿದರು.

ಭೋವಿ ಗುರುಪೀಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ 5 ಲೋಕಸಭಾ ಕ್ಷೇತ್ರಗಳಲ್ಲಿ ಭೋವಿ ಸಮುದಾಯದ ವ್ಯಕ್ತಿಗಳಿಗೆ ಟಿಕೇಟ್ ನೀಡಲು ನಿರಾಸಕ್ತಿ ತೋರಲಾಗಿದೆ. ರಾಷ್ಟ್ರೀಯ ಪಕ್ಷಗಳು ತಮ್ಮ ನಡೆಯನ್ನು ತಿದ್ದಿಕೊಳ್ಳಲಿದ್ದರೆ ಫಲಿತಾಂಶ ವ್ಯತಿರಿಕ್ತವಾಗಲಿದೆ ಎಂದು ಎಚ್ಚರಿಸಿದರು.

ಭಾರತ ಜಾತ್ಯಾತೀತ ದೇಶ. ಭಾರತೀಯರಿಗೆ ಸಂವಿಧಾನವೇ ಮೂಲ ಗ್ರಂಥವಾಗಿದೆ. ಶೋಷಿತ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಂತಾಗಲಿದೆ. ಸಮಪಾಲು, ಸಮಬಾಳು ಎಂಬ ನಿಟ್ಟಿನಲ್ಲಿ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬೇಕಿದೆ. ಆದರೆ ರಾಷ್ಟ್ರೀಯ ಪಕ್ಷಗಳು ಈ ಉದ್ದೇಶ ಮೂಲೆ ಗುಂಪಾಗಿಸಿದೆ ಎಂದರು.

ದೇಶದಲ್ಲಿ ಹತ್ತರಿಂದ ಹದಿನೈದು ಕೋಟಿಯಷ್ಟು ಭೋವಿ ಸಮುದಾಯದ ಜನಸಂಖ್ಯೆಯಿದೆ. ಇಷ್ಟೊಂದು ಬೃಹತ್ ಪ್ರಮಾಣದ ಜನಸಂಖ್ಯೆ ಇದ್ದರೂ ಸಂಸತ್ ಭವನ ಪ್ರವೇಶಕ್ಕೆ ಅನುಕೂಲ ಮಾಡಿಕೊಡದೇ ಇರುವುದು ನೋವಿನ ಸಂಗತಿ. ರಾಜಕೀಯವಾಗಿಯೂ ಭೋವಿ ಸಮುದಾಯವ ತುಳಿಯಲಾಗುತ್ತಿದೆ. ಬೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದರೆ ಸೋಲನ್ನು ಅನುಭವಿಸುತ್ತಿರಾ ಎಂಬ ಸಂದೇಶವ ರವಾನಿಸಲಾಗಿದೆ. ಬಿಜೆಪಿ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರಲು ಭೋವಿ ಸಮಾಜ ಕೊಡುಗೆ ಅಪಾರ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಚಿತ್ರದುರ್ಗ ಹಾಗೂ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಭೋವಿ ಸಮಾಜದ ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ, ಶೋಷಿತ ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನು ನೀಡಬೇಕಾದ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ತೋರಿಸುತ್ತಿರುವುದು ಖಂಡನೀಯ. ಕೇವಲ ಮತ ಹಾಕಲು ಮಾತ್ರ ನಮ್ಮನ್ನು ಬಳಸಿಕೊಳ್ಳಬೇಡಿ. ಸಂಸತ್ ಭವನಕ್ಕೆ ಕಳಿಸಲು ಕೈ ಜೋಡಿಸಿ. ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ ಆದರೆ ಬಿ.ಫಾರಂ ನೀಡಿಲ್ಲ. ಈಗಲೂ ಕಾಲ ಮಿಂಚಿಲ್ಲ. ಭೋವಿ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವುದರ ಬಗ್ಗೆ ಪಕ್ಷದ ವರಿಷ್ಠರು ಆಲೋಚನೆ ಮಾಡ ಬೇಕಿದೆ. ಚಿತ್ರದುರ್ಗದಲ್ಲಿ ಬಿಜೆಪಿ ಪಕ್ಷ ಇನ್ನೂ ಅಭ್ಯರ್ಥಿಯ ಘೋಷಣೆ ಮಾಡಿಲ್ಲ ಅವರು ಸಹ ನಮ್ಮ ಸಮಾಜದವರಿಗೆ ಚಿತ್ರದುರ್ಗದಲ್ಲಿ ಟಿಕೆಟ್ ನೀಡುವುದರ ಮೂಲಕ ಸಮುದಾಯವ ಗುರುತಿಸಬೇಕಿದೆ. ಕಾಂಗ್ರೆಸ್‍ನಲ್ಲಾದರೆ ನೆರ್ಲಗುಂಟೆ ರಾಮಪ್ಪ, ಬಿಜೆಪಿಯಲ್ಲಾದರೆ ರಘುಚಂದನ್ ರವರಿಗೆ ಟಿಕೆಟ್ ನೀಡುವಂತೆ ಇಮ್ಮಡಿ ಶ್ರೀ ಆಗ್ರಹಿಸಿದರು.

ಕೊಲಾರ ಹಾಗೂ ಚಿತ್ರದುರ್ಗ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಆಕಾಂಕ್ಷಿಗಳಿಗೆ ಟಿಕೇಟ್ ನೀಡಬೇಕು ಇಲ್ಲವಾದರೆ, ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದು ಇಮ್ಮಡಿ ಶ್ರೀ ಎಚ್ಚರಿಸಿದರು.

ಈ ವೇಳೆ ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ನೇರ್ಲಗುಂಟೆ ರಾಮಪ್ಪ, ಮೋಹನ್, ರುದ್ರಣ್ಣ, ಲಕ್ಷ್ಮಣ್, ಆಂಜನೇಯ, ತಿಮ್ಮಣ್ಣ, ಮಂಜುನಾಥ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.