ನಾವು ಮಂಡ್ಯದವರು ಯಾರಿಗೂ ಮೋಸ ಮಾಡುವುದಿಲ್ಲ. ನಮ್ಮ ಸರ್ಕಾರಕ್ಕಿಂತ ಹೆಚ್ಚಾಗಿ ಯಾರಾದರೂ ಅಭಿವೃದ್ಧಿ ಮಾಡಿದರೆ ಅವರಿಗೆ ಮತ ನೀಡಿ, ಇಲ್ಲವಾದರೆ ನಮಗೆ ಶಕ್ತಿ ತುಂಬುವ ಕೆಲಸ ಮಾಡಿ. ಬೇರೆಯವರ ಬಗ್ಗೆ ಟೀಕೆ, ಚರ್ಚೆಗಳ ಬಗ್ಗೆ ಗಮನಹರಿಸುವುದಕ್ಕಿಂತ ನಮ್ಮ ಕೆಲಸದ ಬಗ್ಗೆ ದೃಷ್ಟಿ ನೆಟ್ಟರೆ ಸಾರ್ವಜನಿಕರ ಹತ್ತು ಹಲವು ಕೆಲಸಗಳು ಸುಗಮವಾಗಿ ಆಗುತ್ತವೆ ಎಂಬುದು ನನ್ನ ಬಲವಾದ ನಂಬಿಕೆ ಎಂದು ಸಚಿವರು ಭಾವುಕರಾದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಹೇಮಾವತಿ ನಾಲೆಯ ಸಮಗ್ರ ಅಭಿವೃದ್ಧಿ ಜೊತೆಗೆ ಬಸರಾಳು ಹಾಗೂ ನಾಗಮಂಗಲದ ದೇವಲಾಪುರ ಹೋಬಳಿಯ ಹಲವು ಗ್ರಾಮಗಳ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸಲು ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿ, ಬಸರಾಳು ಹಾಗೂ ದೇವಲಾಪುರ ಭಾಗದ ಕೆರೆಗಳನ್ನು ತುಂಬಿಸಲು ಶಾಸಕ ಪಿ.ರವಿಕುಮಾರ್ ಅವರು ಸಲ್ಲಿಸಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಈ ಸಂಬಂಧ ಕಾವೇರಿ ನದಿಯಿಂದ ನೀರು ಪೂರೈಸುವ ಸುಮಾರು ₹1100 ಕೋಟಿ ಮೊತ್ತದ ಯೋಜನೆ ರೂಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಜೊತೆಗೆ ಹೇಮಾವತಿ ನಾಲೆಯ ಸಮಗ್ರ ಅಭಿವೃದ್ಧಿಗೆ ₹350 ಕೋಟಿ ಅನುದಾನ ನೀಡುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.ನಾವು ಮಂಡ್ಯದವರು ಯಾರಿಗೂ ಮೋಸ ಮಾಡುವುದಿಲ್ಲ. ನಮ್ಮ ಸರ್ಕಾರಕ್ಕಿಂತ ಹೆಚ್ಚಾಗಿ ಯಾರಾದರೂ ಅಭಿವೃದ್ಧಿ ಮಾಡಿದರೆ ಅವರಿಗೆ ಮತ ನೀಡಿ, ಇಲ್ಲವಾದರೆ ನಮಗೆ ಶಕ್ತಿ ತುಂಬುವ ಕೆಲಸ ಮಾಡಿ. ಬೇರೆಯವರ ಬಗ್ಗೆ ಟೀಕೆ, ಚರ್ಚೆಗಳ ಬಗ್ಗೆ ಗಮನಹರಿಸುವುದಕ್ಕಿಂತ ನಮ್ಮ ಕೆಲಸದ ಬಗ್ಗೆ ದೃಷ್ಟಿ ನೆಟ್ಟರೆ ಸಾರ್ವಜನಿಕರ ಹತ್ತು ಹಲವು ಕೆಲಸಗಳು ಸುಗಮವಾಗಿ ಆಗುತ್ತವೆ ಎಂಬುದು ನನ್ನ ಬಲವಾದ ನಂಬಿಕೆ ಎಂದು ಸಚಿವರು ಭಾವುಕರಾದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ತಾಲೂಕಿನ ಬಸರಾಳು ವ್ಯಾಪ್ತಿಯ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ₹250 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆ, ಕುಡಿಯುವ ನೀರು ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.ಮನೆ ಇಲ್ಲದ ಅರ್ಹ ಬಡ ಕುಟುಂಬಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸುಮಾರು 40 ಕುಟುಂಬಗಳಿಗೆ ನಿವೇಶನ ಒದಗಿಸಲಾಗಿದೆ. ನಿವೇಶನ ಅಭಿವೃದ್ಧಿಗೆ ₹50 ಲಕ್ಷ ಅನುದಾನ ಬಳಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಇನ್ನಷ್ಟು ನಿವೇಶನ ಒದಗಿಸಲಾಗುವುದು. ಬಸರಾಳು- ದೇವಲಾಪುರ ಭಾಗದ ಕುಡಿಯುವ ನೀರಿನ ಯೋಜನೆ ಹಾಗೂ ಹೇಮಾವತಿ ನಾಲೆ ಅಭಿವೃದ್ಧಿಗೆ ಅಗತ್ಯ ಅನುಮೋದನೆ ಮತ್ತು ಅನುದಾನ ದೊರೆಯುವಂತೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.ಆರೋಗ್ಯ ತಪಾಸಣೆ ಶಿಬಿರದ ಅಗತ್ಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಬೇಕಿರುವುದು ಕಂಡುಬಂದಲ್ಲಿ ಉಚಿತವಾಗಿ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮೀಣ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಶೀಘ್ರ ಪರಿಹರಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಜಾರಿಗೆ ತರಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪೋಡಿ ದುರಸ್ತಿ, ಶುದ್ಧ ಕುಡಿಯುವ ನೀರು, ಬಸ್ ಸೌಲಭ್ಯ, ಪಡಿತರ ಚೀಟಿ, ವಿದ್ಯುತ್ ಸಂಪರ್ಕ, ನಿವೇಶನ ಸಮಸ್ಯೆ ಸೇರಿ ಹತ್ತಾರು ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು. ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ಅಹವಾಲು ಆಲಿಸಿದ ಸಚಿವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿ, ಉಳಿದವುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳು ತೆರೆದಿದ್ದ ಮಳಿಗೆಗಳಿಗೆ ಸಚಿವರು, ಶಾಸಕರು ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಸಾವಯವ ಬೆಲ್ಲದ ಮಳಿಗೆಯಲ್ಲಿ ಬೆಲ್ಲ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಬಾಗಿನ ನೀಡಿ ಶುಭ ಹಾರೈಸಿದರು.ಇದೇ ವೇಳೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ತಪಾಸಣೆಗೊಳಗಾದರು. ಕೆರಗೋಡು ಗ್ರಾಮಸ್ಥರಿಗೆ ನಿವೇಶನಗಳ ಹಕ್ಕುಪತ್ರ, ರೈತರಿಗೆ ಹುಲ್ಲು ಕತ್ತರಿಸುವ ಯಂತ್ರ, ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ಫಲಾನುಭವಿಗಳಿಗೆ ಟ್ಯಾಕ್ಸಿ/ಕ್ಯಾಬ್‌ಗಳನ್ನು ಹಸ್ತಾಂತರಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಸರಾಳು ವೃತ್ತದಿಂದ ವೇದಿಕೆವರೆಗೆ ತೆರೆದ ವಾಹನದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ ಅವರಿಗೆ ಭಾರೀ ಗಾತ್ರದ ಸೇಬಿನ ಹಾರ ಹಾಕಿ ಅಭಿನಂದಿಸಿದರು.ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರುದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.