ಪಟ್ಟಣದಲ್ಲಿ ಕಸದ್ದೇ ದೊಡ್ಡ ಸಮಸ್ಯೆಯಾಗಿದೆ, ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ರಸ್ತೆಗಳಲ್ಲಿ ಕಸ ಎಸೆಯುವವರನ್ನು ಕಂಡರೆ ಕಸವನ್ನು ಅವರ ಮನೆಗಳ ಮುಂದೆ ಎಸೆಯಿರಿ ಎಂದು ಸೂಕ್ಷ್ಮವಾಗಿ ತಿಳಿಸಿದರು. ಪಟ್ಟಣದಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ರಂಗಮಂದಿರ, ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ಪತ್ರಕರ್ತರ ಭವನ, ಕ್ರೀಡಾಂಗಣವನ್ನು ಪೂರ್ಣಗೊಳಿಸಿ ಜನರಿಗೆ ಅರ್ಪಿಸಲಾಗುವುದು.
ಬಂಗಾರಪೇಟೆ ನಗರಸಭೇಲಿ ಒತ್ತುವರಿದಾರರಿಗೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ ನಗರ ಅಭಿವೃದ್ಧಿಗೆ ಮಾರಕವಾಗಿರುವ ಒತ್ತುವರಿಯನ್ನು ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು, ತಪ್ಪಿದಲ್ಲಿ ಪುರಸಭೆ ಸಿಬ್ಬಂದಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವರು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.ಪುರಸಭೆ ಕಚೇರಿಯಲ್ಲಿ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಿದ್ದು, ಸದಸ್ಯರೊಂದಿಗೆ ಸಮಾಲೋಚನೆ ಸಭೆಯ ಬಳಿಕ ಮಾತನಾಡಿದ ಅವರು, ಪಟ್ಟಣ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ, ವಾಹನಗಳ ಸಂಚಾರ ಸಹ ದಟ್ಟವಾಗಿದೆ, ಆದರೆ ರಸ್ತೆ, ಚರಂಡಿ, ಪಾದಚಾರಿಗಳ ಮಾರ್ಗವನ್ನು ಅಕ್ರಮ ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ, ಇದನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಸೂಚಿಸಿದ್ದರೂ ಕಡೆಗಣಿಸಲಾಗಿತ್ತು. ಈಗ ಕೊನೆ ಎಚ್ಚರಿಕೆ ನೀಡಲಾಗಿದೆ. ಒತ್ತುವರಿದಾರರೇ ತೆರವುಗೊಳಿಸಬೇಕು, ಇಲ್ಲದಿದ್ದರೆ ಪುರಸಭೆ ಸಿಬ್ಬಂದಿ ತೆರವುಗೊಳಿಸುತ್ತಾರೆ ಎಂದು ತಿಳಿಸಿದರು. ಪಟ್ಟಣವನ್ನು ಸುಂದರವಾಗಿಡಲು ಹಾಗೂ ಸ್ವಚ್ಛವಾಗಿಡಲು ತೆರವು ಅಗತ್ಯವಾಗಿದೆ, ಇದರೊಂದಿಗೆ ರಸ್ತೆಗಳನ್ನು ಅಗಲೀಕರಣ ಮಾಡಬೇಕು ಎಂದರು.
ಪಟ್ಟಣದಲ್ಲಿ ಯಾರೂ ಸಹ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು. ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದೇ ನಿರ್ಮಾಣ ಮಾಡಬೇಕು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ನಿಲ್ಲಿಸಲಾಗುವುದು, ಕಟ್ಟಡ ನಿರ್ಮಿಸುವವರು ಅನುಮತಿ ಪಡೆದು ಮುಂದುವರಿಯಬೇಕು. ಪಟ್ಟಣದಲ್ಲಿ ಯೋಜನಾ ಪ್ರಾಧಿಕಾರ ರಚನೆಯಾಗಿರುವುದರಿಂದ ಎಲ್ಲಾ ಹೊಸ ಬಡಾವಣೆ, ಕಟ್ಟಡಗಳಿಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.ಸರ್ವೇ ನಂ. ೧೦೩ ಹಾಗೂ ೧೫ರಲ್ಲಿ ಬೋಗಸ್ ದಾಖಲೆಗಳನ್ನು ಪಡೆದು ಒತ್ತುವರಿ ಮಾಡಿಕೊಂಡಿರುವವರು ಖಾಲಿ ಮಾಡಿ ಅಲ್ಲಿ ಮಟನ್ ಮಾರುಕಟ್ಟೆ, ಬಡವರಿಗೆ ನಿವೇಶನ ನೀಡಲಾಗುವುದು ಹಾಗೂ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗುವುದು. ಆದ್ದರಿಂದ ಒತ್ತುವರಿದಾರರು ಇಂದೇ ತೆರವು ಮಾಡಿ ಎಂದು ಮನವಿ ಮಾಡಿದರು.
ಮುಂದಿನ ಪುರಸಭೆ ಚುನಾವಣೆಯಲ್ಲಿ ಎಲ್ಲಾ ಸದಸ್ಯರು ತಮ್ಮ ವಾರ್ಡುಗಳಲ್ಲಿರುವ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿ ಜನರು ವಿಶ್ವಾಸಗಳಿಸಿ, ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮುಂದಾಗಿ ಎಂದು ಕರೆ ನೀಡಿದರು.ಪಟ್ಟಣದಲ್ಲಿ ಕಸದ್ದೇ ದೊಡ್ಡ ಸಮಸ್ಯೆಯಾಗಿದೆ, ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ರಸ್ತೆಗಳಲ್ಲಿ ಕಸ ಎಸೆಯುವವರನ್ನು ಕಂಡರೆ ಕಸವನ್ನು ಅವರ ಮನೆಗಳ ಮುಂದೆ ಎಸೆಯಿರಿ ಎಂದು ಸೂಕ್ಷ್ಮವಾಗಿ ತಿಳಿಸಿದರು. ಪಟ್ಟಣದಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ರಂಗಮಂದಿರ, ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ಪತ್ರಕರ್ತರ ಭವನ, ಕ್ರೀಡಾಂಗಣವನ್ನು ಪೂರ್ಣಗೊಳಿಸಿ ಜನರಿಗೆ ಅರ್ಪಿಸಲಾಗುವುದು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ, ಮಾಜಿ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ, ಶಂಷುದ್ದೀನ್ ಬಾಬು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ಜೆಇ ರವಿಕುಮಾರ್, ಪ್ರಭಾರ ಮುಖ್ಯಾಧಿಕಾರಿ ಸಂತೋಷ್ ಹಾಗೂ ಎಲ್ಲಾ ಸದಸ್ಯರು ಇದ್ದರು.