ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ಆಗ್ರಹಿಸಿ ಏಡ್ಸೋ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಿ ನಂತರ ಕಳೆದ ನವೆಂಬರ್ ತಿಂಗಳಿಂದ ಫೆಬ್ರವರಿವರೆಗೆ ಹಾಸನದ ಯುವಜನರು, ಉದ್ಯೋಗಾಕಾಂಕ್ಷಿಗಳು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ ನೂರಾರು ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ನೇಮಕಾತಿಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು, ಅರ್ಜಿ ಶುಲ್ಕ ಕಡಿತ ಮಾಡಬೇಕು, ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಗಳನ್ನು ನಾಶ ಮಾಡುವ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಕೈ ಬಿಡಬೇಕು ಇತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಹಾಗೂ ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ಆಗ್ರಹಿಸಿ ಏಡ್ಸೋ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಿ ನಂತರ ಕಳೆದ ನವೆಂಬರ್ ತಿಂಗಳಿಂದ ಫೆಬ್ರವರಿವರೆಗೆ ಹಾಸನದ ಯುವಜನರು, ಉದ್ಯೋಗಾಕಾಂಕ್ಷಿಗಳು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ ನೂರಾರು ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಎಐಡಿವೈಒ ಸಂಘಟನೆ ಜಿಲ್ಲಾ ಸಂಚಾಲಕ ಟಿ. ಆರ್. ಸುನಿಲ್ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಅದನ್ನು ತುಂಬಿಕೊಳ್ಳುವ ಪ್ರಕ್ರಿಯ ನಡೆಯುತ್ತಿಲ್ಲ. ಕಳೆದ ಐದಾರು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ನೇಮಕಾತಿಗಳಾಗದಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಆಕ್ರೋಶ ಮಡುಗಟ್ಟಿದೆ. ವಿದ್ಯಾರ್ಥಿಗಳು ಪದೇ ಪದೇ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ನಿರಂತರ ಹೋರಾಟದ ಪ್ರತಿಫಲವಾಗಿ ಮುಖ್ಯಮಂತ್ರಿಗಳು ಕಳೆದ ಡಿಸೆಂಬರ್‌ನಲ್ಲಿ ೫೬,೪೩೨ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಮತ್ತು ಬೆಳಗಾವಿ ಅಧಿವೇಶನದಲ್ಲಿ ೨೪,೩೦೦ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಘೋಷಿಸಿದರು. ಆದರೆ ತಿಂಗಳುಗಳು ಕಳೆದರೂ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿಲ್ಲ. ಈಗ ಮತ್ತೆ ಹೋರಾಟದ ಬಿಸಿ ತಟ್ಟಿದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ೫೬,೦೦೦ ಹುದ್ದೆಗಳ ನೇಮಕಾತಿಗೆ ಅನುಮೋದನೆ ದೊರೆತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದು ಕೇವಲ ಬಾಯಿ ಮಾತಾಗದೇ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ರಾಜ್ಯಸರ್ಕಾರವನ್ನು ಒತ್ತಾಯಿಸಿದರು. ಅದರ ಜೊತೆಗೆ ಖಾಲಿ ಇರುವ ಎಲ್ಲಾ ೨,೮೪,೮೮೧ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ತಡೆಗಟ್ಟಬೇಕು. ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಬೇಕು, ನೇಮಕಾತಿಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು, ಅರ್ಜಿ ಶುಲ್ಕ ಕಡಿತ ಮಾಡಬೇಕು, ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಗಳನ್ನು ನಾಶ ಮಾಡುವ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಕೈ ಬಿಡಬೇಕು ಇತ್ಯಾದಿ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿದರು.ಶಿಕ್ಷಣ ಇಲಾಖೆಯಲ್ಲಿಯೇ ಸುಮಾರು ೫೮ ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಚಿತ್ರಕಲೆ, ಸಂಗೀತ ಹಾಗೂ ದೈಹಿಕ ಶಿಕ್ಷಣದಂತಹ ವಿಶೇಷ ಶಿಕ್ಷಕರ ಕೊರತೆಯೂ ಹೆಚ್ಚಾಗಿದೆ. ಇದರಿಂದ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ಕಾರಣ ನೀಡಿ ಹಳ್ಳಿಗಳ ಶಾಲೆಗಳನ್ನು ವಿಲೀನಗೊಳಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಬಡ ಹಾಗೂ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟಾಗುವುದರ ಜೊತೆಗೆ ಶಿಕ್ಷಕರ ಹುದ್ದೆಗಳೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಇನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ದುಬಾರಿ ಅರ್ಜಿ ಶುಲ್ಕ ವಿಧಿಸುವುದು ನಿರುದ್ಯೋಗಿ ಯುವಕರಿಗೆ ಮತ್ತೊಂದು ಭಾರವಾಗಿದೆ. ಒಂದಕ್ಕಿಂತ ಹೆಚ್ಚು ಇಲಾಖೆಗಳ ನೇಮಕಾತಿಗೆ ಅರ್ಜಿ ಹಾಕಲು ಸಾವಿರಾರು ರುಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತಿದೆ. ಜೊತೆಗೆ ಪರೀಕ್ಷೆ ಮತ್ತು ಸಂದರ್ಶನಗಳಿಗೆ ವಿವಿಧ ನಗರಗಳಿಗೆ ಪ್ರಯಾಣಿಸಲು ಕೂಡ ಹೆಚ್ಚಿನ ವೆಚ್ಚವಾಗುತ್ತಿದೆ. ಈಗಾಗಲೇ ಸಂಕಷ್ಟದಲ್ಲಿರುವ ಯುವಕರಿಗೆ ಇದು ಮತ್ತಷ್ಟು ತೊಂದರೆಯಾಗುತ್ತಿದೆ ಎಂದರು. ಆದ್ದರಿಂದ ಮುಖ್ಯಮಂತ್ರಿಗಳು ಘೋಷಿಸಿದಂತೆ ೫೬,೪೩೨ ಹುದ್ದೆಗಳ ನೇಮಕಾತಿಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕು. ರಾಜ್ಯದ ೪೩ ಇಲಾಖೆಗಳಲ್ಲಿರುವ ೨,೮೪,೮೮೧ ಖಾಲಿ ಹುದ್ದೆಗಳ ಭರ್ತಿಗೆ ಸ್ಪಷ್ಟ ಯೋಜನೆ ರೂಪಿಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿ ಪರೀಕ್ಷಾ ಅಕ್ರಮಗಳನ್ನು ತಡೆಯಬೇಕು. ದುಬಾರಿ ಅರ್ಜಿ ಶುಲ್ಕವನ್ನು ರದ್ದುಪಡಿಸಿ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಉದ್ಯೋಗ ದೊರೆಯುವವರೆಗೆ ನಿರುದ್ಯೋಗ ಭತ್ಯೆ ನೀಡಬೇಕು ಹಾಗೂ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನೀತಿಯನ್ನು ಕೈಬಿಟ್ಟು ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಎಐಡಿವೈಒ ಉದ್ಯೋಗ ಆಕಾಂಕ್ಷಿ ಹೋರಾಟ ಸಮಿತಿ ಅಧ್ಯಕ್ಷ ರಘು, ಉಪಾಧ್ಯಕ್ಷರಾದ ರತನ್, ಶರತ್, ಸಂತೋಷ್, ಶಿವಕುಮಾರ್ ನಾಯ್ಕ್ ಹಾಗೂ ಸಮಿತಿ ಸದಸ್ಯರಾದ ಗೌತಮ್, ಯೋಗೆಶ್, ಅರುಣ್, ಆದರ್ಶ್, ಮನೋಜ್, ಶಿವು, ಅಪ್ಪು, ದೀಪು, ಮಂಜು, ಹೇಮಂತ್, ಸಾಗರ್, ಪ್ರಸನ್ನ, ಕಾರ್ತಿಕ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.