ಈ ವರ್ಷ ಇದೂವರೆಗೂ ಮಳೆ ಆಗದ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹೇಮಾವತಿ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ತಕ್ಷಣ ತುಮಕೂರು ಜಿಲ್ಲೆಗೆ ಹರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಈ ವರ್ಷ ಇದೂವರೆಗೂ ಮಳೆ ಆಗದ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹೇಮಾವತಿ ಜಲಾಶಯದಲ್ಲಿ ಸಂಗ್ರಹವಿರುವ ನೀರನ್ನು ತಕ್ಷಣ ತುಮಕೂರು ಜಿಲ್ಲೆಗೆ ಹರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊರೂರು ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಜಿಲ್ಲೆಯ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೂಡಲೇ ಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ನೀರಾವರಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದರು. ಇತ್ತೀಚೆಗೆ ತಾವು ನೀರಾವರಿ ತಜ್ಞರ ಜೊತೆ ಗೋರೂರು ಜಲಾಶಯಕ್ಕೆ ಭೇಟಿ ನೀಡಿದ್ದು, ಜಲಾಶಯದಲ್ಲಿ ಒಟ್ಟು 17.90 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್ ವಾಟರ್, ಉಳಿದ 12 ಟಿಎಂಸಿ ನೀರನ್ನು ತುಮಕೂರು ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ ಹರಿಸಬೇಕು ಎಂದು ಒತ್ತಾಯಿಸಿದರು.

ಮಳೆ ಅಭಾವದ ಕಾರಣ ಜನ, ಜಾನುವಾರು, ಪ್ರಾಣಿಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಟಿಬಿಸಿ ನಾಲೆ ಮುಖಾಂತರ ತುರ್ತಾಗಿ ಹೇಮಾವತಿ ನೀರು ಹರಿಸಿ ಪರಿಸ್ಥಿತಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಕಾವೇರಿ ನೀರಾವರಿ ಟ್ರಬ್ಯೂನಲ್ ಆದೇಶದಂತೆ ತುಮಕೂರು ಜಿಲ್ಲೆಗೆ 25.03 ಟಿಎಂಸಿ ನೀರು ಹರಿಸಬೇಕು. ಆದರೆ ಆದೇಶ ನೀಡಿ 18 ವರ್ಷಗಳಾದರೂ ನಮ್ಮ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅಲ್ಲದೆ 18 ವರ್ಷ ಕಳೆದರೂ ತುಮಕೂರು ನಾಲಾವಲಯದ ಒಂದೇ ಒಂದು ಎಕರೆ ಜಮೀನನ್ನು ಅಚ್ಚುಕಟ್ಟು ಪ್ರದೇಶವೆಂದು ಘೋಷಿಸಿಲ್ಲ, ಅಲ್ಲದೆ ಈ ಬಗ್ಗೆ ಗೆಜೆಟ್‌ನಲ್ಲೂ ನೋಟಿಫಿಕೇಶನ್ ಆಗಿಲ್ಲ ಎಂದು ಸೊಗಡು ಶಿವಣ್ಣ ಹೇಳಿದರು.

18- 4- 2026 ರಂದು ಎತ್ತಿನಹೊಳೆ ಯೋಜನೆಯ ಮುಖ್ಯ ಎಂಜಿನಿಯರ್‌ರವರು ಕೆಲವು ಜನಪ್ರತಿನಿಧಿಗಳ ಜೊತೆ ತುಮಕೂರಿನಲ್ಲಿ ಸಭೆ ನಡೆಸಿ, 2026ರಲ್ಲಿ ಬಾಕಿ ಇರುವ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸಿ, ನಾಲೆಯಲ್ಲಿ ನೀರು ಹರಿಸುವುದಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದು ಸಾಧ್ಯವೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಕಾರಣ ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗೆ ನಿಗದಿಯಾಗಿರುವ ನೀರು ಹರಿಸಲು ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಕೋಳಾಲ ಹತ್ತಿರವಿರುವ ಭೈರಗೊಂಡ್ಲುವಿನಲ್ಲಿ 5.75 ಟಿ.ಎಂ.ಸಿ. ಸಾಮರ್ಥ್ಯದ ಜಲಾಶಯ ನಿರ್ಮಿಸಲು ನಿರ್ಧರಿಸಿ ಅದು ಟೆಂಡರ್ ಸಹ ಆಗಿತ್ತು. ನಂತರದ ದಿನಗಳಲ್ಲಿ ಅದನ್ನು ರದ್ದುಪಡಿಸಿ ದೊಡ್ಡಬಳ್ಳಾಪುರ ತಾಲೂಕು, ಮಚ್ಚೇನಹಳ್ಳಿ, ಶ್ರೀರಾಮನಹಳ್ಳಿ ಹತ್ತಿರ, 1.75 ಟಿ.ಎಂ.ಸಿ. ಸಾಮರ್ಥ್ಯದ ಜಲಾಶಯ ನಿರ್ಮಿಸಲು ಡಿ.ಪಿ.ಆರ್. ತಯಾರಿಸಲಾಯಿತು. ಆದರೆ ಸರ್ಕಾರ ಮತ್ತು ನೀರಾವರಿ ಇಲಾಖೆ ಇದುವರೆವಿಗೂ ಯಾವುದೇ ನಿರ್ದಿಷ್ಟವಾದ ನಿರ್ಧಾರ ತೆಗೆದುಕೊಳ್ಳದೆ ಮುಂದೂಡಿಕೊಂಡು ಹೋಗುತ್ತಿರುವುದು ಎಷ್ಟು ಸರಿ. ಹೀಗಿರುವಾಗ ಈ ವರ್ಷದ ಕೊನೆಯಲ್ಲಿ ಎತ್ತಿನಹೊಳೆ ಯೋಜನೆಯ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಹರಿಸುವ ಹೇಳಿಕೆ ನೀಡಿರುವುದು ಜನರನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಸಾಮಾಜಿಕ ಹೋರಾಟಗಾರ ಪ್ರಭಾಕರ್ ಮ್ಯಾಸನಾಯಕ, ಎನ್.ಆರ್. ಶ್ರೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.