ಸಾರಾಂಶ
- ಕ್ಷೇತ್ರದ ಎಲ್ಲಾ ರಸ್ತೆಗಳು ಗುಂಡಿ ಬಿದ್ದಿದೆ, ರಸ್ತೆಯ ಗುಂಡಿ ಮುಚ್ಚಿಸಿ। ಸುದ್ದಿಗೋಷ್ಠಿಯಲ್ಲಿ ಸುಧಾಕರ ಶೆಟ್ಟಿ ಆಗ್ರಹ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶೃಂಗೇರಿ ಕ್ಷೇತ್ರದ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಭಾಗದಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ತಕ್ಷಣ ಸ್ಥಳಾಂತರಿಸುವಂತೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಆಗ್ರಹಿಸಿದರು.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಕಾಡಾನೆಗಳ ಸಮಸ್ಯೆ ದೊಡ್ಡದಾಗಿದೆ. ಕ್ಷೇತ್ರದಲ್ಲಿ ಕಾಡಾನೆಯಿಂದ 5 ಜನ ಮೃತಪಟ್ಟಿದ್ದಾರೆ. ನೂರಾರು ಎಕರೆ ಜಮೀನು ಹಾಳುಮಾಡಿದೆ. ಪರಿಹಾರ ಕೇಳಿದರೆ ಅರಣ್ಯ ಇಲಾಖೆ ಯವರು 3 ರಿಂದ 4 ಸಾವಿರ ರು. ನೀಡುತ್ತಾರೆ. ಶಾಸಕ ಟಿ.ಡಿ.ರಾಜೇಗೌಡರು ರೇಲ್ವೆ ಬ್ಯಾರಿಕೇಡ್ ಹಾಕಿಸಿ ನಾಡಿಗೆ ಕಾಡಾನೆ ಬರದಂತೆ ಶಾಶ್ವತವಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ನೀಡಿದ್ದ ಭರವಸೆಯಂತೆ ಸಮಸ್ಯೆ ಬಗೆಹರಿಸಿಲ್ಲ. ರೇಲ್ವೆ ಬ್ಯಾರಿಕ್ಯಾಡ್ ಆಗಲಿ, ಸೋಲಾರ್ ಬೇಲಿಯಾಗಲಿ ಅಥವಾ ಆನೆ ಕಂದಕವನ್ನೂ ನಿರ್ಮಿಸಿಲ್ಲ.ಕಾಡಾನೆಗಳು ಕೊಪ್ಪ ಪಟ್ಟಣದ ಪೆಟ್ರೋಲ್ ಬಂಕ್ ಸಮೀಪ ಬಂದು ಹೋಗಿದೆ. ಇದರಿಂದ ಜನ ಭಯ ಭೀತರಾಗಿದ್ದಾರೆ. ಕಾಡಾನೆಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ. ರಾಜ್ಯ ಅರಣ್ಯ ಸಚಿವರಿಗೆ ಮಲೆನಾಡಿನ ಜನರ ಕಷ್ಟಗಳ ಅರಿವಿಲ್ಲ. ಶಾಸಕ ಟಿ.ಡಿ.ರಾಜೇಗೌಡರು ತಕ್ಷಣ ಕಾಡಾನೆಗಳನ್ನು ಸ್ಥಳಾಂತರ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಆಗ್ರಹಿಸಿದರು.
ಗುಂಡಿಗಳನ್ನು ಮುಚ್ಚಿಸಿ: ಶೃಂಗೇರಿ ಕ್ಷೇತ್ರದ ಎಲ್ಲಾ ರಸ್ತೆಯಲ್ಲೂ ಗುಂಡಿ ಬಿದ್ದಿದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಶಾಸಕರು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಗುಂಡಿಯನ್ನು ತಕ್ಷಣ ಮುಚ್ಚಿಸಬೇಕು ಎಂದು ಒತ್ತಾಯಿಸಿದರು.ಕೆಲವು ರಸ್ತೆಗಳಲ್ಲಿ ಜನರೇ ಗುಂಡಿಗಳಿಗೆ ಮಣ್ಣು ತುಂಬಿಸುತ್ತಿದ್ದಾರೆ. ಇದರಿಂದ ರಸ್ತೆ ಮತ್ತಷ್ಟು ಹಾಳಾಗುತ್ತಿದೆ.ಶಾಸಕರು ರಸ್ತೆ ದುರಸ್ತಿ ವಿಚಾರದಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಶೃಂಗೇರಿಯ ಎಲ್ಲಾ ರಸ್ತೆ ಹಾಳಾಗಿವೆ. ಇಡೀ ರಾಜ್ಯದಲ್ಲಿ ಶೃಂಗೇರಿ ಕ್ಷೇತ್ರದ ರಸ್ತೆಯೇ ಹೆಚ್ಚು ಹಾಳಾಗಿದೆ. ಕಟ್ಟಿನಮನೆ ಸೇತುವೆ, ಹೆಗ್ಗಾರ್ ಕೊಡಿಗೆ ಸೇತುವೆ ಹಾಗೂ ಬನ್ನೂರು ಸೇತುವೆ ಕುಸಿದಿದೆ. ಶೃಂಗೇರಿ ಕ್ಷೇತ್ರಕ್ಕೆ ವಸ್ತಾರೆ-ಕಣತಿ ಮೂಲಕ ಬರಬೇಕಾಗಿದೆ.ಆ ರಸ್ತೆ ಮೂಡಿಗೆರೆ ಕ್ಷೇತ್ರಕ್ಕೆ ಸೇರಿದ್ದು ಈ ಬಗ್ಗೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮಗೆ ಪತ್ರ ಬರೆದಿದ್ದೇನೆ. ನನ್ನ ಪತ್ರಕ್ಕೆ ಅವರು ಸ್ಪಂದಿಸಿ ರಸ್ತೆ ದುರಸ್ತಿ ಬಗ್ಗೆ ಉತ್ತರ ನೀಡಿದ್ದಾರೆ ಎಂದರು.
ಅರಣ್ಯ ಕಾನೂನು ಅಡ್ಡಿ: ಕೊಪ್ಪದಲ್ಲಿ ಶಂಕರ್ ಮಿಲ್ ಸಮೀಪ 1 ಸಾವಿರ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಪ್ರಾರಂಭಿಸಿಲು ಉದ್ದೇಶಿಸಿದ್ದೇನೆ. ಇದು ಲಾಭದಾಯಕ ಅಲ್ಲದಿದ್ದರೂ ಮಹಿಳೆಯರ ಉದ್ಯೋಗಕ್ಕಾಗಿ ಪ್ರಾರಂಭಿಸುತ್ತಿದ್ದೇನೆ. ಆದರೆ, ಆ ಜಾಗವನ್ನು ಸೊಪ್ಪಿನಬೆಟ್ಟ ಎಂದು ತಕರಾರು ತೆಗೆಯಲಾಗಿದೆ. ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ. ಈ ಬಗ್ಗೆ ಶಾಸಕರಿಗೆ ಪತ್ರ ಬರೆದಿದ್ದೇನೆ. ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಕೈಗಾರಿಕೆಗೆ ಸಾಕಷ್ಟು ಅವಕಾಶವಿದೆ. ಇದಕ್ಕೆ ಜಿಲ್ಲಾಧಿಕಾರಿ ಪ್ರೋತ್ಸಾಹ ನೀಡಬೇಕು. ಈಗಿರುವ ಅರಣ್ಯ ಕಾಯ್ದೆಗಳಿಂದ ಕೈಗಾರಿಕೆ ನಡೆಸಲು ಅಡ್ಡಿಯಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ನೀಡಿ ಕೈಗಾರಿಕೆ, ಉದ್ಯಮಕ್ಕೆ ಮುಂದೆ ಬರುವವರಿಗೆ ಸರ್ಕಾರವೇ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ , ಕಾರ್ಯಾಧ್ಯಕ್ಷ ಶಿವದಾಸ್, ಜೆಡಿಎಸ್ ಮುಖಂಡರಾದ ಸುಬಾನ್, ವಿಜೇಂದ್ರ ಕೋಣನಕೆರೆ, ಉಪೇಂದ್ರಗೌಡ, ಹೂವಣ್ಣ ಇದ್ದರು.