ಡಂಬಳ: ಶುಕ್ರವಾರ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಹಿಂದೂ- ಮುಸ್ಲಿಮರು ಆಚರಿಸಿದರು. ವಿವಿಧೆಡೆ ಸ್ಥಾಪಿಸಿದ ಅಲಾಯಿ ದೇವರನ್ನು ಜನರು ಭಕ್ತಿ ಭಾವದಿಂದ ಆರಾಧಿಸಿದರು. ಕೆಲ ಗ್ರಾಮಗಳಲ್ಲಿ ಮುಸ್ಲಿಮರು ಇಲ್ಲದೆ ಇದ್ದರೂ ಹಿಂದೂಗಳೇ ಮುಂದಾಳತ್ವ ವಹಿಸಿದ್ದರು.

ಡಂಬಳ ಹೋಬಳಿಯ ಡೋಣಿ, ಮೇವುಂಡಿ, ಪೇಠಾಆಲೂರ, ಹಿರೇವಡ್ಡಟ್ಟಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಹಬ್ಬದ ಆಚರಣೆ ಜರುಗಿತು.

ಡಂಬಳ ಗ್ರಾಮದ ಮುಖ್ಯ ಪೇಟೆಯಲ್ಲಿ ಮುಂಜಾನೆ ಅಲಾಯಿ ದೇವರು ಭೇಟಿ ನೀಡುವ ವೇಳೆ ಎರಡು ಗುಂಗಾಡಿ ಹುಳುಗಳು ಬಂದು ಅಲಾಯಿ ದೇವರ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಮಾಯವಾಗುತ್ತಿದ್ದು, ಡಂಬಳ ಕೋಟೆಯಿಂದ ಈ ಗುಂಗಾಡಿ ಹುಳುಗಳು ಬರುತ್ತವೆ ಎಂದು ಜನರಲ್ಲಿ ನಂಬಿಕೆ ಇದೆ. ಇಂದಿಗೂ ಆ ಗುಂಗಾಡಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ನೋಡಿದ ಜನರು‌ ನಮಸ್ಕರಿಸಿ ಸಂತಸದಿಂದ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಭಾನುವಾರ ಸಂಜೆ ಅಲಾಯಿ ದೇವರ ಮೆರವಣಿಗೆ ಜರುಗಿತು. ಜನರು ಹೂವಿನ ಹಾರ ಹಾಕಿ, ಸಕ್ಕರೆ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು. ಅಲಾಯಿ ದೇವರು ಸ್ಥಾಪನೆಯಾದ ದಿನದಿಂದ ಜನರು ಮಸೀದಿಗೆ ಆಗಮಿಸಿ ಹರಕೆ ತೀರಿಸಿದರು.

ಹೆಜ್ಜೆ ಮೇಳ: ಡಂಬಳ‌ ಗ್ರಾಮದಲ್ಲಿ ಅಲಾಯಿ ದೇವರ ಮುಂದೆ ಮುಂಜಾನೆ ಹಿರೇವಡ್ಡಟ್ಟಿ ಗ್ರಾಮದ ರೇಣುಕಾ ದೇವಿ ಯುವಕರ ಸಂಘದಿಂದ ಹೆಜ್ಜೆ ಮೇಳ ನಡೆಯಿತು. ಅಳ್ಳೊಳ್ಳಿಗಳಿಂದ ವಿಶೇಷ ದಿರಿಸುಗಳ ಮೂಲಕ ಭಕ್ತಿ ಸಮರ್ಪಿಸಿದರು. ಅಲಾಯಿ ದೇವರ ವಿಜರ್ಸನೆ ದಿನ ಗ್ರಾಮದ ಯುವಕರ ತಂಡದಿಂದ ಹಸೇನ ಹುಸೇನರ ಜೀವನ ಆಧರಿತ ಹಾಡುಗಳನ್ನು ಹಾಡುತ್ತಾ ಹಲಗೆ ಮೇಳಕ್ಕೆ ಯವಕರು ಹೆಜ್ಜೆ ಹಾಕಿದರು.


ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಭಕ್ತಿ ಸಮರ್ಪಿಸಿದರು. ಅಲಾಯಿ ದೇವರ ಮೆರವಣಿಗೆಗೆ ಸಂದರ್ಭದಲ್ಲಿ ಡಂಬಳ ಪೊಲೀಸ್‌ ಹೊರಠಾಣಾ ವತಿಯಿಂದ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಪಂಜಾಗಳಿಗೆ ವಿಶೇಷ ಪೂಜೆ

ರೋಣ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮೊಹರಂ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸೌಹಾರ್ದತೆಯಿಂದ ಆಚರಿಸಲಾಯಿತು.ಗ್ರಾಮಗಳಲ್ಲಿ ಮೊಹರಂ ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಂಜೆ ಕಣ್ಮನ ಸೆಳೆಯುವ ಪಂಜಾ(ಅಲಾಯಿ ದೇವರು) ಮೆರವಣಿಗೆ ಜರುಗಿತು.ಪಟ್ಟಣದ ಹೊರಪೇಟಿ, ಮುಲ್ಲನಬಾವಿ, ಪೋತದಾರ ರಾಜನ‌ಕಟ್ಟೆ ಸೇರಿದಂತೆ ವಿವಿದ ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ದೇವರ ಪಂಜಾಗಳಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ಧೂಪಾರ್ಪಣೆ ನೆರವೇರಿಸಲಾಯಿತು. ಸಕ್ಕರೆ ಪ್ರಸಾದ ಸಮರ್ಪಿಸಿ ಹರಕೆ ತೀರಿಸಿದರು.

​ಹಜರತ್ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ ಯುವಕರು "ದೂಲಾ "(ಹುಲಿ ವೇಷ) ಧರಿಸಿ ಗಮನ ಮೆರವಣಿಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.ತಾಲೂಕಿನ ಅರಹುಣಸಿ, ಹಿರೇಮಣ್ಣೂರು, ಸಂದಿಗವಾಡ, ಹುಲ್ಲೂರು, ಮುದೇನಗುಡಿ, ಕುರಹಟ್ಟಿ, ಅಬ್ಬಿಗೇರಿ, ಸವಡಿ, ಮಲ್ಲಾಪುರ, ಹೊಸಳ್ಳಿ, ಚಿಕ್ಕಮಣ್ಣೂರು, ಹೊನ್ನಾಪೂರ, ಕೊತಬಾಳ, ಹಿರೇಹಾಳ, ಕೌಜಗೇರಿ, ಬೆಳವಣಕಿ ಸೇರಿದಂತೆ ವಿವಿಧ ಪ್ರಮುಖ ಗ್ರಾಮಗಳಲ್ಲಿ ಮೊಹರಂ ಆಚರಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

​ತಡರಾತ್ರಿವರೆಗೂ ಪಂಜಾ ಮೆರವಣಿಗೆ ಜರುಗಿ ಬಳಿಕ ಪಂಜಾಗಳನ್ನು ಪವಿತ್ರ ಬಾವಿ, ಹಳ್ಳ, ಹೊಂಡ ಹಾಗೂ ಕೆರೆಗಳಲ್ಲಿ ಭಕ್ತಿಭಾವದಿಂದ ವಿಸರ್ಜನೆ(ತಂಪಾಗಿಸುವುದು) ಮಾಡುವ ಮೂಲಕ ಮೊಹರಂ ಹಬ್ಬಕ್ಕೆ ವಿದಾಯ ಹೇಳಲಾಯಿತು.