ಸರ್ಕಾರ ಖಾಸಗಿ ಶಾಲೆಗಳ ಪ್ರಾರಂಭಕ್ಕಾಗಿ ಅನುಮತಿ ನೀಡುತ್ತಿಲ್ಲ. ಸರ್ಕಾರ ವಿಧಿಸಿರುವ ಎಲ್ಲಾ ನಿಯಮಗಳಿಗೆ ಬದ್ಧವಾಗಿ ಪರವಾನಗಿ ಪಡೆದಿರುವ ಶಾಸ್ತಾ ಪಬ್ಲಿಕ್ ಶಾಲೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.

ಕುಮಾರಪಟ್ಟಣ: ಸರ್ಕಾರ ಖಾಸಗಿ ಶಾಲೆಗಳ ಪ್ರಾರಂಭಕ್ಕಾಗಿ ಅನುಮತಿ ನೀಡುತ್ತಿಲ್ಲ. ಸರ್ಕಾರ ವಿಧಿಸಿರುವ ಎಲ್ಲಾ ನಿಯಮಗಳಿಗೆ ಬದ್ಧವಾಗಿ ಪರವಾನಗಿ ಪಡೆದಿರುವ ಶಾಸ್ತಾ ಪಬ್ಲಿಕ್ ಶಾಲೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.

ರಾಣಿಬೆನ್ನೂರು ತಾಲೂಕಿನ ಮಾಕನೂರ ಕ್ರಾಸ್‌ ಸಮೀಪ ವಡೇರಾಯನಹಳ್ಳಿ ರಸ್ತೆಯ ಪಕ್ಕದಲ್ಲಿ, ಹರಿಹರ ತಾಲೂಕಿನ ವಿನಾಯಕ ನಗರ ಕ್ಯಾಂಪನ ಕಾಲಜ್ಞಾನ ಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶಾಸ್ತಾ ವಿದ್ಯಾ ಪೀಠ್‌ ಟ್ರಸ್ಟ್‌ನಿಂದ ನೂತನವಾಗಿ ಆರಂಭಿಸಿರುವ, ಶಾಸ್ತಾ ಪಬ್ಲಿಕ್ ಶಾಲೆಯ ಮಕ್ಕಳಿಗೆ ಅಕ್ಷರಭ್ಯಾಸ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ನೀಡುವುದು ಶಾಲೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಶಿಕ್ಷಣದ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದ್ದು, ಶಾಲೆಯ ಶಿಕ್ಷಕರು ಹಾಗೂ ಪೋಷಕರುಗಳ ಪರಸ್ಪರ ಸಹಕಾರದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಪಾಲಕರಿಗೆ, ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಗೆ ಸಂಪ್ರದಾಯ ಬದ್ಧವಾಗಿ ಅಕ್ಷರಭ್ಯಾಸ ನೆರವೇರಿಸಲಾಯಿತು. ಬಳಿಕ ನಡೆದ ಪೋಷಕರ ಸಭೆಯಲ್ಲಿ ಶಾಲೆಯ ಶೈಕ್ಷಣಿಕ ಯೋಜನೆಗಳು, ಬೋಧನಾ ವಿಧಾನಗಳು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಶಾಲೆಯ ಆಡಳಿತ ಮಂಡಳಿಯಿಂದ ಮಾಹಿತಿ ನೀಡಲಾಯಿತು.ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಯ್ಕ ಎಲ್., ಶಿಕ್ಷಕ ಸಂತೋಷ ದೊಡ್ಮನಿ, ಸಿಆರ್‌ಸಿ ಎನ್.ಎನ್‌. ಅಣ್ಣೇರ ಮಾತನಾಡಿದರು. ಶಾಸ್ತ ವಿದ್ಯಾಟ್ರಸ್ಟ್ ಕಾರ್ಯದರ್ಶಿ ನಾಗರತ್ನಾ ಸಂತೋಷ ದೊಡ್ಮನಿ ಸ್ವಾಗತಿಸಿದರು. ಎಸ್.ಎಸ್. ನಾರಾಯಣ ಹೃದಯಾಲಯ ಆಸ್ಪತ್ರೆಯ ಪ್ರಸನ್ನಾ, ಸಿ. ರಾಜು ಉಕ್ಕುಂದ, ಶಾಸ್ತಾ ಪಬ್ಲಿಕ್ ಶಾಲೆಯ ಗೌರವಾಧ್ಯಕ್ಷರಾದ ನಾಗರಾಜ ಕುಣಿಗಲ್, ಉಪಾಧ್ಯಕ್ಷರುಗಳಾದ ಶಿವಮ್ಮ ನಾಗರಾಜ ಕುಣಿಗಲ್, ಬೀರಪ್ಪ ಎಸ್‌. ಕಣಿವೆಪ್ಪನವರ, ನಾಗರತ್ನಾ ಎಸ್‌. ದೊಡ್ಮನಿ, ಬಸವರಾಜ ಕುಣಿಗಲ್, ರಾಘವೇಂದ್ರ ಘೋರ್ಪಡೆ, ಪುಟ್ಟಪ್ಪ ಮೇಶಿನ್, ಸಿದ್ದೇಶ್ವರ ಕೆ.ಎಂ., ಹನುಮಂತಪ್ಪ ಕೋಡೇರ, ಉಮೇಶ್ ಹೊನ್ನಪ್ಪನವರ, ದುರುಗೇಶ ಮದರಂಗಿ ಉಪಸ್ಥಿತರಿದ್ದರು.