ಧಾರ್ಮಿಕ ಘೋಷಣೆಗಳ ನಡುವೆ ಸಾಗಿದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಮನ ಸೆಳೆಯಿತು.
ಕಾರಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೊಹರಂ ಅಂಗವಾಗಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು (ಪಾಂಜಾ)ಗಳ ಭವ್ಯ ಮೆರವಣಿಗೆ ಹಾಗೂ ದಫನ್ (ವಿಸರ್ಜನೆ) ಕಾರ್ಯಕ್ರಮ ಶುಕ್ರವಾರ ಸಂಜೆ ಶ್ರದ್ಧಾ-ಭಕ್ತಿಯಿಂದ ನೆರವೇರುವುದರೊಂದಿಗೆ ಮೊಹರಂ ಆಚರಣೆ ವಿಧಿವತ್ತಾಗಿ ಸಂಪನ್ನಗೊಂಡಿತು.
ಪಟ್ಟಣದ ಐತಿಹಾಸಿಕ ಸುಕಲವೀರಪ್ಪನ ಬಾವಿ ಬಳಿ ಮಸೀದಿ, ಉಪ್ಪಾರ ಓಣಿಯ ಮಸೀದಿಯಿಂದ ಅಲಾಯಿ ದೇವರನ್ನು ಭಕ್ತರು ಮೆರವಣಿಗೆಯ ಮೂಲಕ ಡಾ.ರಾಜ್‌ಕುಮಾರ್ ರಂಗಮಂದಿರದ ಬಳಿಯ ಅಲಾಯಿ ಕುಣಿಗೆ ಕೊಂಡೊಯ್ದು ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಸರ್ಜನೆ ನೆರವೇರಿಸಿದರು. ಬಳಿಕ ವೆಂಕಟೇಶ್ವರ ದೇವಾಲಯದ ಎದುರುಗಡೆ ಇರುವ ಮಸೀದಿ ಹಾಗೂ ನಜೀರ್ ಕಾಲನಿಯ ಮಸೀದಿಗಳಿಂದ ಬಂದ ಅಲಾಯಿ ದೇವರುಗಳು ಒಂದೇ ಸ್ಥಳದಲ್ಲಿ ಸೇರಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದತೆಯ ಸಂದೇಶ ಸಾರಿದರು.ಮೆರವಣಿಗೆಯಲ್ಲಿ ಯುವಕರು, ಹಿರಿಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಕ್ತರು ಕಟ್ಟಿಗೆಗೆ ವಿವಿಧ ಹರಕೆ ವಸ್ತು ಕಟ್ಟಿಕೊಂಡು, ಬಣ್ಣಬಣ್ಣದ ಛತ್ರಿಗಳನ್ನು ಹಿಡಿದು ಹಲಗೆ, ಜಾಂಜ್ ಹಾಗೂ ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು. ಧಾರ್ಮಿಕ ಘೋಷಣೆಗಳ ನಡುವೆ ಸಾಗಿದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಮನ ಸೆಳೆಯಿತು. ಯುವಕರು ಎರಡು ಕಡೆಯ ಅಲಾಯಿ ಕುಣಿಯ ಸುತ್ತ ಬೆಂಕಿ ಹಾಕಿ ಸಂಪ್ರದಾಯದ ಹೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿ ಕುಣಿದರು.
ತಾಲೂಕಿನ ಬೂದುಗುಂಪಾ, ಯರಡೋಣಾ, ಚೆಳ್ಳೂರು, ಹಗೆದಾಳ, ಹುಳ್ಕಿಹಾಳ, ಸಿದ್ದಾಪುರ, ನದಿ ತೀರಾದ ಹಳ್ಳಿಗಳಲ್ಲಿಯೂ ಅಲಾಯಿ ದೇವರ ದಫನ್ ಕಾರ್ಯಕ್ರಮಗಳು ಶಾಂತಿಯುತವಾಗಿ ನೆರವೇರಿದವು. ಮುಸ್ಲಿಂ ಸಮುದಾಯದವರು ಮಾತ್ರವಲ್ಲದೆ ವಿವಿಧ ಧರ್ಮಗಳ ಜನರು ಕೂಡ ಭಾಗವಹಿಸಿ ಭಕ್ತಿ ಹಾಗೂ ಸೌಹಾರ್ದತೆ ಮೆರೆದರು.ಹಬ್ಬದ ಅಂಗವಾಗಿ ಕಾರಟಗಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ, ಭದ್ರತೆ ಹಾಗೂ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಮೊಹರಂ ಆಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು,ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಐಕ್ಯತೆಗೆ ಈ ಆಚರಣೆ ಮತ್ತೊಮ್ಮೆ ಸಾಕ್ಷಿಯಾಯಿತು.