ಹುಟ್ಟೂರಿನ ಕೆರೆಯಲ್ಲಿ ಭೈರಪ್ಪ ಅಸ್ಥಿ ವಿಸರ್ಜನೆ

| Published : Sep 29 2025, 01:04 AM IST

ಹುಟ್ಟೂರಿನ ಕೆರೆಯಲ್ಲಿ ಭೈರಪ್ಪ ಅಸ್ಥಿ ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಖ್ಯಾತ ಕಾದಂಬರಿಕಾರ, ಚಿಂತಕ ಎಸ್.ಎಲ್.ಭೈರಪ್ಪ ಅವರ ಅಸ್ಥಿ ವಿಸರ್ಜನೆಯು ಭಾನುವಾರ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅವರ ಹುಟ್ಟೂರಾದ ಸಂತೇಶಿವರದಲ್ಲಿ ನೆರವೇರಿತು.

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

ಭಾರತದ ಖ್ಯಾತ ಕಾದಂಬರಿಕಾರ, ಚಿಂತಕ ಎಸ್.ಎಲ್.ಭೈರಪ್ಪ ಅವರ ಅಸ್ಥಿ ವಿಸರ್ಜನೆಯು ಭಾನುವಾರ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅವರ ಹುಟ್ಟೂರಾದ ಸಂತೇಶಿವರದಲ್ಲಿ ನೆರವೇರಿತು. ಭೈರಪ್ಪ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯ್‌ಶಂಕರ್ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿ, ನೀರು ತುಂಬಿಸಿರುವ ಸಂತೇಶಿವರ ಕೆರೆಯಲ್ಲಿ ಅಸ್ಥಿ ವಿಸರ್ಜನೆ ನೆರವೇರಿಸಿದರು. ಅಸ್ಥಿ ವಿಸರ್ಜನೆಗೂ ಮುನ್ನ ಮಂತ್ರೋಚ್ಚಾರಣೆ, ಘೋಷಗಳು ಮೊಳಗುತ್ತಿದ್ದಂತೆ ಗ್ರಾಮದಲ್ಲಿ ಅಸ್ಥಿ ಮೆರವಣಿಗೆ ನಡೆದಿದ್ದು, ನೂರಾರು ಮಂದಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಭಾವನಾತ್ಮಕವಾಗಿ ಸಾಕ್ಷಿಯಾದರು. ಭೈರಪ್ಪ ಅವರ ನೆನಪಿನೊಂದಿಗೆ ನಡೆದ ಈ ಅಂತಿಮ ಕ್ರಿಯೆಯಲ್ಲಿ ಸ್ಥಳೀಯರು, ಅಭಿಮಾನಿಗಳು ಹಾಗೂ ಸಾಹಿತ್ಯ ಪ್ರೇಮಿಗಳು ಹಾಜರಿದ್ದು, ದಿಗ್ಗಜ ಲೇಖಕರಿಗೆ ಕಣ್ಣೀರು ತುಂಬಿದ ಶ್ರದ್ಧಾಂಜಲಿ ಸಲ್ಲಿಸಿದರು.

ಬಾಲ್ಯವನ್ನು ಇದೇ ಗ್ರಾಮದಲ್ಲಿ ಕಳೆದಿದ್ದ ಭೈರಪ್ಪನವರು ಆಗಿನ ಕಾಲದಲ್ಲಿ ಸಂತೇಶಿವರದ ಕೆರೆಯಲ್ಲಿ ಈಜುತ್ತಿದ್ದ ದಿನಗಳನ್ನು ತಮ್ಮ ಕಡೆಯ ದಿನಗಳಲ್ಲಿ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದರು. ಹಾಗೆಯೇ ಬತ್ತಿಹೋಗಿದ್ದ ಈ ಕೆರೆಗೆ ಏತ ನೀರಾವರಿ ಮೂಲಕ ಹೇಮಾವತಿ ನೀರು ತುಂಬಿಸಲು ಭೈರಪ್ಪನವರ ಕೊಡುಗೆ ಸಾಕಷ್ಟಿದೆ.

ಅರ್ಧಕ್ಕೆ ನಿಂತುಹೋಗಿದ್ದ ಈ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿದ್ದರು. ಅದರ ಫಲವಾಗಿ ಕಳೆದ ವರ್ಷ ಕಾಮಗಾರಿ ಪೂರ್ಣಗೊಂಡು ಕೆರೆಗೆ ನೀರು ತುಂಬಿಸಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದತಗಡೂರು, ಸಹೋದರ ಕೃಷ್ಣಮೂರ್ತಿ ಮತ್ತಿತರರಿದ್ದರು.