ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಒಬ್ಬ ವ್ಯಕ್ತಿಯ ಆರೋಗ್ಯ ಹದಗೆಟ್ಟರೆ ಅದರ ಪರಿಣಾಮ ಇಡೀ ಕುಟುಂಬದ ಮೇಲೆ ಬೀರುತ್ತದೆ. ಉತ್ತಮ ಆರೋಗ್ಯ ಹೊಂದಿ, ಸಮಾಜಕ್ಕೆ ಬೇಕಾದವರಾಗಿ ಬದುಕುವುದೇ ನಿಜವಾದ ಜೀವನ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಥಳೀಯ ನಂದಿನಿ ಆಸ್ಪತ್ರೆಯ ಬೆಳ್ಳಿ ಹಬ್ಬದ ಪ್ರಯುಕ್ತ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ, ಎ.ಕೆ. ಸುಬ್ಬಯ್ಯ ಎಜುಕೇಶನ್ ಟ್ರಸ್ಟ್, ಕೊಡವ ಸಮಾಜ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಹಾಗೂ ಶ್ರೀರಾಮ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಉಚಿತ ರೋಗಗಳ ತಪಾಸಣೆ ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳ ಆರೋಗ್ಯ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ವಾಹನಗಳಿಗೆ ಹೇಗೆ ಕಾಲಕಾಲಕ್ಕೆ ಸರ್ವೀಸ್ ಮಾಡುತ್ತೇವೆಯೋ, ಆಗಿಂದಾಗ್ಗೆ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವುದೂ ಅಗತ್ಯ ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗು ಮೆಡಿಕಲ್ ಕಾಲೇಜು ಅಧೀನದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿವೆ. ಜಿಲ್ಲೆಯ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.
ವೈದ್ಯರಾದ ಡಾ. ಸುಶ್ರುತ್ ಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಡಾ.ವಿಶಾಲ್ ಕುಮಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ನಂದಿನಿ ಆಸ್ಪತ್ರೆಯ ನಿರ್ದೇಶಕ ಹಾಗೂ ಕೊಡವ ಸಮಾಜದ ಸ್ಪೋರ್ಟ್ಸ್ ಆ್ಯಂಡ್ ಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಕುಮಾರ್, ಆರೋಗ್ಯಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್, ಜಿಲ್ಲಾ ಶಸ್ತ ಚಿಕಿತ್ಸಕ ಡಾ. ನಂಜುಂಡಯ್ಯ, ಸ್ಥಾನೀಯ ವೈದ್ಯಾಧಿಕಾರಿ ಡಾ.ಸತೀಶ್, ಮುಖ್ಯ ವೈದ್ಯಾಧಿಕಾರಿ ಡಾ. ಎಚ್.ವಿ. ದೇವದಾಸ್, ಬೆಂಗಳೂರಿನ ಸಪ್ತಗಿರಿ ಮೆಡಿಕಲ್ ಕಾಲೇಜಿನ ಪ್ರತಿನಿಧಿ ನಿರಂಜನ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ, ಹೊದ್ದೂರು ಪಂಚಾಯಿತಿ ಅಧ್ಯಕ್ಷ ಎಚ್.ಎ. ಹಂಸ, ಶ್ರೀ ರಾಮಟ್ರಸ್ಟ್ ಶಾಲೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಮತ್ತಿತರರು ಹಾಜರಿದ್ದರು.ಹೃದಯ ರೋಗ, ಮೂತ್ರಪಿಂಡ, ನರರೋಗಗಳ ತಪಾಸಣೆ ನಡೆಯಿತು. ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ನಮೋಗ್ರಾಫಿ ಮತ್ತು ಗರ್ಭ ಕೊರಳಿನ ಉಚಿತ ಪರೀಕ್ಷೆ, ಬಿಪಿ, ಇಸಿಜಿ, ಎಕೋ ಸ್ಕ್ಯಾನಿಂಗ್ ಇತ್ಯಾದಿ ಪರೀಕ್ಷೆಗಳ ಸೌಲಭ್ಯವನ್ನು ನೂರಾರು ಜನರು ಪಡೆದುಕೊಂಡರು. ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು.
ಕೆಲೇಟಿರ ದಿವ್ಯ ಮುತ್ತಪ್ಪ ಪ್ರಾರ್ಥಿಸಿದರು. ಶಾಲಾ ಮುಖ್ಯಶಿಕ್ಷಕಿ ಕಲ್ಯಾಟಂಡ ಶಾರದ ಸ್ವಾಗತಿಸಿದರು. ಬಾಲೆಯಡ ದಿವ್ಯ ಮಂದಪ್ಪ ಮತ್ತು ನಾಯಕಂಡ ತೃಷ ತಂಗಮ್ಮ ನಿರೂಪಿಸಿದರು. ದಿವ್ಯ ವಂದಿಸಿದರು.