ಪ್ರತಿಯೊಂದು ಧಾರ್ಮಿಕ ಪೂಜಾ ಕೈಂಕರ್ಯ ಅನ್ನ ದಾಸೋಹಗಳಿಗೆ ತನು, ಮನ, ಧನ ನೀಡಿ ಭಕ್ತರು ಕೈ ಜೋಡಿಸುವ ಮೂಲಕ ಧಾರ್ಮಿಕ ಕೇಂದ್ರಗಳನ್ನು ಬೆಳೆಸುತ್ತಿದ್ದಾರೆ ಎಂದು ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
- ಶ್ರೀ ಹಾಲಸ್ವಾಮೀಜಿ ಜಾತ್ರೆ, ಮುಳ್ಳುಗದ್ದಿಗೆ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರತಿಯೊಂದು ಧಾರ್ಮಿಕ ಪೂಜಾ ಕೈಂಕರ್ಯ ಅನ್ನ ದಾಸೋಹಗಳಿಗೆ ತನು, ಮನ, ಧನ ನೀಡಿ ಭಕ್ತರು ಕೈ ಜೋಡಿಸುವ ಮೂಲಕ ಧಾರ್ಮಿಕ ಕೇಂದ್ರಗಳನ್ನು ಬೆಳೆಸುತ್ತಿದ್ದಾರೆ ಎಂದು ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಮಾವಾಸ್ಯೆ ಧಾರ್ಮಿಕ ಸಮಾರಂಭದಲ್ಲಿ ಫೆ.17ರ ಮಂಗಳವಾರ, ಫೆ.18ರ ಬುಧವಾರ ನಡೆಯಲಿರುವ ಶ್ರೀ ಹಾಲಸ್ವಾಮೀಜಿ ಜಾತ್ರಾ ಮಹೋತ್ಸವ, ಮುಳ್ಳುಗದ್ದಿಗೆ ಉತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳು ಮತ್ತು ಯುವ ಪೀಳಿಗೆಗೆ ವೀರಶೈವ ಲಿಂಗಾಯತ ಪರಂಪರೆ, ಧಾರ್ಮಿಕ ವಿಧಿವಿಧಾನಗಳು, ಇಷ್ಟಲಿಂಗ ಪೂಜೆ ಮಹತ್ವ ತಿಳಿಸುವ ಹೊಣೆ ಪ್ರತಿಯೊಬ್ಬ ವೀರಶೈವ ಲಿಂಗಾಯತರ ಮೇಲಿದೆ. `ಲಿಂಗತತ್ವವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ವೀರಶೈವ ಧರ್ಮ ಮುಂದಿನ ಪೀಳಿಗೆಗೂ ದೃಢವಾಗಿ ಸಾಗುತ್ತದೆ. ಲಿಂಗ ಪೂಜೆಯೇ ವೀರಶೈವ ಧರ್ಮದ ಕೇಂದ್ರಬಿಂದು. `ಲಿಂಗ ಪೂಜೆಗಿಂತ ಶ್ರೇಷ್ಠವಾದ ಪೂಜೆ ಮತ್ತೊಂದು ಇಲ್ಲ. ಲಿಂಗ ಪೂಜೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸದಾ ಲಿಂಗವನ್ನು ಕೊರಳಲ್ಲಿ ಧರಿಸಿ ಪೂಜೆ ಮಾಡುವ ವೀರಶೈವ ಲಿಂಗಾಯತರು ಅತ್ಯಂತ ಭಾಗ್ಯಶಾಲಿಗಳು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ ಮಾತನಾಡಿ, ಶ್ರೀ ಹಾಲಸ್ವಾಮೀಜಿ ಜಾತ್ರಾ ಮಹೋತ್ಸವ, ಮುಳ್ಳುಗದ್ದಿಗೆ ಉತ್ಸವವು ಫೆ.17, 18ರಂದು ನಡೆಯಲಿದೆ. ಇದರ ಅಂಗವಾಗಿ ಫೆ.1ರ ಭಾನುವಾರ ಗಂಗಾ ಪೂಜಾ , ಧರ್ಮ ಧ್ವಜಾರೋಹಣ, ಹಂದರ ಕಂಬದ ಪೂಜೆಯೊಂದಿಗೆ ಚಾಲನೆಗೊಳ್ಳಲಿದೆ. ಫೆ.17ರ ಬೆಳಗ್ಗೆ ಲೋಕಕಲ್ಯಾಣಾರ್ಥ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ತುಲಾಭಾರ, ಧಾರ್ಮಿಕ ಸಮಾರಂಭ ನಡೆಯಲಿದೆ ಎಂದರು.
ಮಂಗಳವಾರ ರಾತ್ರಿ ಶ್ರೀ ಹಾಲಸ್ವಾಮೀಜಿ ಜಾತ್ರಾ ಮಹೋತ್ಸವ, ಮುಳ್ಳುಗದ್ದಿಗೆ ಉತ್ಸವವೂ ಗ್ರಾಮದ ಬೀದಿಯಲ್ಲಿ ನಡೆಯಲಿದ್ದು ಫೆ.18ರ ಬುಧವಾರ ಬೆಳಗಿನ ಜಾವ ಶ್ರೀ ಹಾಲಸ್ವಾಮೀಜಿ ಕರ್ತೃಗದ್ದುಗೆಗಳಿಗೆ ಹಾಗೂ ಇಷ್ಟಲಿಂಗ ಪೂಜೆ, ಗಣಂಗಳ ಸೇವೆ, ಶ್ರೀ ಹಾಲಸ್ವಾಮೀಜಿ ಪಲಕ್ಕಿ ಹಾಗೂ ತೇಜಿ ಉತ್ಸವ ಮತ್ತು ತುಂಗಭದ್ರಾ ನದಿಯಲ್ಲಿ ಪೂಜೆ ಕಾರ್ಯಕ್ರಮಗಳು ಭಕ್ತರ ಸಹಕಾರದೊಂದಿಗೆ ನಡೆಯಲಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅರಕೆರೆ ವಿರಕ್ತ ಮಠದ ಚನ್ನವೀರ ಸ್ವಾಮೀಜಿ , ಪತ್ರಕರ್ತ ಎಂ.ಎಸ್.ಶಾಸ್ತ್ರಿ ಹೊಳೆಮಠ್, ಶ್ರೀ ಹಾಲಸ್ವಾಮೀಜಿ ಸೇವಾ ಸಮಿತಿಯ ಪದಾಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
- - --18ಎಚ್ಎಲ್.ಐ2:
ಗೋವಿನಕೋವಿ ಶ್ರೀ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಭಾನುವಾರ ಶ್ರೀ ಕೇದಾರ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀ ಹಾಲಸ್ವಾಮೀಜಿ ಜಾತ್ರಾ ಮಹೋತ್ಸವ, ಮುಳ್ಳುಗದ್ದಿಗೆ ಉತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು.