ಸಾರಾಂಶ
ರಾಣಿಬೆನ್ನೂರು: ಸರ್ಕಾರ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಫೆಬ್ರವರಿ ತಿಂಗಳ ಒಳಗಾಗಿ ಅನುಷ್ಠಾನ ಮಾಡುವ ಮೂಲಕ ಸರ್ಕಾರಕ್ಕೆ ಹಣ ಹಿಂದಿರುಗಿ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಡಾ.ಎಸ್.ರಂಗಸ್ವಾಮಿ ಅವರು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು. ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಸೇರಿದಂತೆ ಹಲವಾರು ಕಾಮಗಾರಿ ಕೈಗೊಳ್ಳಲು ಸಾಕಷ್ಟು ಅವಕಾಶವಿದೆ. ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ರಂಗಸ್ವಾಮಿ ಸೂಚಿಸಿದರು. ನರೇಗಾ ಯೋಜನೆಯಡಿ 17 ಕಿಮೀ ನೆಡುತೋಪುಗಳನ್ನು ಬೆಳೆಸಲಾಗಿದೆ. 3125 ಸೀಡ್‌ಗಳನ್ನು ವಿತರಿಸಲಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ವಿಜಯಕುಮಾರ ಸಭೆಗೆ ಮಾಹಿತಿ ನೀಡಿದರು. ಯಾವ ತರಹದ ಸಸಿಗಳನ್ನು ಬೆಳೆಸಿರುವಿರಿ? ಎಂದು ಪ್ರಶ್ನಿಸಿದ ರಂಗಸ್ವಾಮಿ, ಸಿರಿಗಂಧ ಕುರಿತು ರೈತರಿಗೆ ಅರಿವು ಮೂಡಿಸಿ. ವೆಸ್ಟ್ ಲ್ಯಾಂಡ್ ನಲ್ಲಿ ಈ ರೀತಿಯ ಮರಗಳನ್ನು ಬೆಳೆಸಬಹುದು. ಎಕರೆಗೆ 50-60 ಲಕ್ಷ ಆದಾಯ ಲಭಿಸುತ್ತದೆ ಎಂದು ಅರಣ್ಯ ಅಧಿಕಾರಿಗೆ ಸಲಹೆ ನೀಡಿದರು. ಪಂಚಾಯತ್ ರಾಜ್ ಇಲಾಖೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಡಾ.ರಂಗಸ್ವಾಮಿ, ನೀತಿ ಸಂಹಿತೆ ಬರುವ ಮೊದಲೇ ವರ್ಕ್ ಆರ್ಡರ್ ಕೊಡಿ ಎಂದು ಅಧಿಕಾರಿಗೆ ಸೂಚಿಸಿದರು. ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 5 ಕಾಮಗಾರಿ ಬಾಕಿ ಉಳಿಯಲು ಕಾರಣ ತಿಳಿಸಿ ಎಂದು ಡಾ. ರಂಗಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಹನುಮಂತಪ್ಪ, ಹಳೆ ಪೈಪ್‌ಲೈನ್ ಇರುವ ಕಾರಣ ಹೊಸ ಕಾಮಗಾರಿಗೆ ಜನರು ಅಡ್ಡಿಪಡಿಸುತ್ತಿದ್ದಾರೆ ಎಂದು ಉತ್ತರಿಸಿದರು. ಗುಡ್ಡದ ಆನ್ವೇರಿ ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಆಕ್ರೋಶ ಹೊರಹಾಕಿದ ಡಾ.ರಂಗಸ್ವಾಮಿ ಓಎಚ್‌ಟಿ ನಿರ್ಮಾಣ ಮಾಡದೇ ಪೇಮೆಂಟ್ ಏಕೆ ಮಾಡಿದಿರಿ? ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿದಲ್ಲಿ ಅವರು ಬರೊಲ್ಲ. ಅವರಿಗೆ ಸಂಪೂರ್ಣ ಕೆಲಸವಾದ ಮೇಲೆ ಪೇಮೆಂಟ್ ಮಾಡಿ ಎಂದು ಆದೇಶಿಸಿದರು.ಸುಣಕಲ್ಲಬಿದರಿ ಗ್ರಾಮದಲ್ಲಿ ನೀರು ನಿಲ್ಲದಂತೆ ಕೆಲಸ ಮಾಡಲು ನಾನು ಹೇಳಿದರೂ ಇನ್ನೂ ಮಾಡಿಲ್ಲ. ಅದು ಕೇವಲ ಮೂರು ದಿನಗಳಲ್ಲಿ ಆಗುವ ಕೆಲಸ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೆಆರ್‌ಐಡಿಎಲ್ ಇಲಾಖೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಡಾ.ರಂಗಸ್ವಾಮಿ, 2015-16ನೇ ಸಾಲಿನ ಕೆಲಸ ಇಂದಿಗೂ ಮುಗಿದಿಲ್ಲ. ಹೀಗಾದರೆ ಹೇಗೆ? ಎಷ್ಟು ತಿಂಗಳಲ್ಲಿ ಕೆಲಸ ಮುಗಿಸುವಿರಿ? ಸಮಸ್ಯೆಗಳನ್ನು ಅರಿತು ಬಾಕಿ ಕೆಲಸಗಳನ್ನು ಪೂರ್ಣ ಮಾಡಿ. ಕಟ್ಟಡದ ಮೇಲೆ ನೀರು ಹರಿದು ಹೋಗುವಂತೆ ಕಾಂಕ್ರೀಟ್ ಹಾಕಬೇಕು ಎಂದು ತಾಕೀತು ಮಾಡಿದರು. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಸಭೆಗೆ ಮಾಹಿತಿ ನೀಡಿದರು. ಆಗ ಮಾತನಾಡಿದ ಡಾ.ರಂಗಸ್ವಾಮಿ, ಯಾಂತ್ರೀಕರಣದಲ್ಲಿ ಎಸ್‌ಸಿ, ಎಸ್‌ಟಿಗೆ ಪ್ರಾಶಸ್ತ್ಯ ಇಲ್ಲ ನೀಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು? ಇದಕ್ಕೆ ಉತ್ತರಿಸಿದ ಶಾಂತಮಣಿ, ಅನುದಾನ ಬಿಡುಗಡೆ ವಿಳಂಬವಾಗಿರುವುದರಿಂದ ಹೀಗಾಗಿದೆ ಎಂದರು. ತುಂತುರು ನೀರಾವರಿ ಸಲಕರಣೆಗಳ ಗುಣಮಟ್ಟ ಕಳಪೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಡಾ.ರಂಗಸ್ವಾಮಿ ಅವರು ಕೃಷಿ ಅಧಿಕಾರಿಯಿಂದ ವಿವರಣೆ ಕೇಳಿದರು. ಇದಕ್ಕ ಸಮಜಾಯಿಷಿ ನೀಡಿದ ಕೃಷಿ ಅಧಿಕಾರಿ, ನೀರಾವರಿ ಪೈಪ್‌ಗಳನ್ನು ಬಳಕೆ ಮಾಡದಿದ್ದರೆ ಗುಣಮಟ್ಟ ಹಾಳಾಗುವ ಸಾಧ್ಯತೆಯಿರುತ್ತದೆ ಎಂದರು. ಬಿತ್ತನೆ ಬೀಜಗಳು, ಗೊಬ್ಬರ ದಾಸ್ತಾನು ಕುರಿತು ಮಾಧ್ಯಮಕ್ಕೆ ನಿರಂತರ ಮಾಹಿತಿ ನೀಡಿ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಮಳೆ ಜಾಸ್ತಿ ಆಗಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕ್ರಮ ಜರುಗಿಸಿ ಎಂದು ಡಾ. ರಂಗಸ್ವಾಮಿ ಕೃಷಿ ಅಧಿಕಾರಿಗೆ ಸೂಚಿಸಿದರು.ಜನಸ್ಪಂದನದಲ್ಲಿ, ಅಕ್ರಮ ಮದ್ಯ ಮಾರಾಟ ದೂರುಗಳು ಕೇಳಿ ಬಂದಿವೆ. ಇದರ ಬಗ್ಗೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಡಾ.ರಂಗಸ್ವಾಮಿ ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್ ಹನುಮಂತಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿ, ಆ ರೀತಿ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಈಗಾಗಲೇ ಇಂತಹ ಪ್ರಕರಣಗಳಿಗೆ ತಾಲೂಕಿನಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ತಾಪಂ ಇಒ ಪರಮೇಶ ವೇದಿಕೆಯಲ್ಲಿದ್ದರು.ಸಭೆಯ ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ನರೇಗಾ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.ಸಭೆಯಲ್ಲಿ ತೋಟಗಾರಿಕೆ, ಹೆಸ್ಕಾಂ, ಸಣ್ಣ ನೀರಾವರಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ನಾಡಗೀತೆ ಹಾಡಿಸಲಿಲ್ಲಸರ್ಕಾರದ ಸಭೆ, ಸಮಾರಂಭದ ಪ್ರಾರಂಭದಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಿರುತ್ತದೆ. ಆದರೆ ಇಂದು ನಡೆದ ಸಭೆಯಲ್ಲಿ ನಾಡಗೀತೆ ಹಾಡಿಸಲಿಲ್ಲ.