ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಆಶ್ರಯದಲ್ಲಿ ನಗರದ ಶಾರದಾ ವಿದ್ಯಾಲಯದಲ್ಲಿ ಇತ್ತೀಚೆಗೆ ‘ವ್ಯಸ್ತ ಜೀವನ - ಸ್ವಸ್ಥ ಭೋಜನ’ ಆರೋಗ್ಯಕ್ಕಾಗಿ ಪಾರಂಪರಿಕ ಆಹಾರ ಕಾರ್ಯಕ್ರಮ ನಡೆಯಿತು.

ಮಂಗಳೂರು: ಸಾವಯವ ಕೃಷಿ ಬಗ್ಗೆ ಮಾತು ಮಾತ್ರ ಅಲ್ಲ, ಅದನ್ನು ಕೃತಿಯಲ್ಲಿಯೂ ಮಾಡಿ ತೋರಿಸುವ ಕೆಲಸ ಮಂಗಳೂರಿನಲ್ಲಿ ಆಗುತ್ತಿದೆ. ಇದು ಇಂದಿನ ಅವಶ್ಯತೆಯೂ ಹೌದು. ಸಾವಯವ ಕೃಷಿ, ಆಹಾರದ ಅಗತ್ಯತೆ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯಕ್ರಮಗಳು ದೇಶಕ್ಕೇ ಮಾದರಿ ಎಂದು ‘ಭಾರತದ ಗ್ರೀನ್‌ ಹೀರೋ’ ಎಂದೇ ಖ್ಯಾತರಾಗಿರುವ ಆರ್‌.ಕೆ. ನಾಯರ್‌ ಹೇಳಿದರು.ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಆಶ್ರಯದಲ್ಲಿ ನಗರದ ಶಾರದಾ ವಿದ್ಯಾಲಯದಲ್ಲಿ ಭಾನುವಾರ ‘ವ್ಯಸ್ತ ಜೀವನ - ಸ್ವಸ್ಥ ಭೋಜನ’ ಆರೋಗ್ಯಕ್ಕಾಗಿ ಪಾರಂಪರಿಕ ಆಹಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆಧುನಿಕತೆಯ ಭರಾಟೆಯಲ್ಲಿ ಇಂದಿನ ನಮ್ಮ ಜೀವನವೇ ಅಸ್ತವ್ಯಸ್ಥವಾಗಿದೆ. ಮಕ್ಕಳು ಜೀವನದ ಮಾದರಿಯನ್ನೇ ಬದಲಾಯಿಸುತ್ತಿದ್ದಾರೆ. ಜಾಹೀರಾತು ನೋಡಿ ಆಹಾರ ಸೇವಿಸುತ್ತಿದ್ದಾರೆ. ಪರಿಣಾಮ 18-20 ವರ್ಷಕ್ಕೇ ಹೃದಯಾಘಾತ ಸಂಭವಿಸುತ್ತಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ.ಪುರಾಣಿಕ್‌ ಅವರು ‘ವ್ಯಸ್ತ ಭೋಜನ - ಸ್ವಸ್ಥ ಭೋಜನ’ ಹೆಸರಿನ ಪುಸ್ತಕ ಬಿಡುಗಡೆ ಮಾಡಿದರು. ಟ್ರಸ್ಟಿ ಪ್ರದೀಪ ಕುಮಾರ ಕಲ್ಕೂರ, ಬಳಗದ ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್‌, ಅಧ್ಯಕ್ಷ ಜಿ.ಆರ್‌. ಪ್ರಸಾದ್‌ ಇದ್ದರು.ಕಾರ್ಯದರ್ಶಿ ರತ್ನಾಕರ ಕುಳಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಕ್ಷಾಯಿಣಿ ವಿಶ್ವೇಶ್ವರ ಸ್ವಾಗತಿಸಿ, ಪರಿಚಯಿಸಿದರು. ರಾಮಚಂದ್ರ ಭಟ್‌ ವಂದಿಸಿದರು. ಸಾವಿತ್ರಿ ರಮೇಶ್‌ ಭಟ್‌ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಭಾಗವಾಗಿ ಸ್ಥಳದಲ್ಲಿಯೇ ಅಡುಗೆ ಮಾಡುವ ಸ್ಪರ್ಧೆ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಗಳು, ತಿಂಡಿ ತಿನಿಸುಗಳ ಮೇಳ ನಡೆಯಿತು. ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜಯಾನಂದ ಡೇರೇಕರ ಜೋಯಿಡಾ, ಸಂಜೀವ್‌ ಜಗನ್ಮೋಹನ್‌ ಬೆಂಗಳೂರು ಅವರು ಭಾಗವಹಿಸಿದ್ದರು.