ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ಕೋರ್ಸ್ ಪೂರ್ಣಗೊಳಿಸಿದ ಎಲ್ಲ ತರಬೇತಾರ್ಥಿಗಳು ತರಬೇತಿಯಲ್ಲಿ ಕಲಿತ ಅಂಶಗಳನ್ನು ಕಾರ್ಯರೂಪಕ್ಕೆ ತಂದು ನಿಮ್ಮ ಸುತ್ತಲಿನ ರೈತರಿಗೆ ಅನುಕೂಲ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಬುಧವಾರ ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಒಂಓಂಉಇ ಹೈದರಾಬಾದ್, ಸಮೇತಿ(ಉತ್ತರ) ಕೃಷಿ ವಿವಿ ಧಾರವಾಡ, ಕೃಷಿ ಇಲಾಖೆ ಕೊಪ್ಪಳ, ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಗಂಗಾವತಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ಕೋರ್ಸ್ ಪೂರ್ಣಗೊಳಿಸಿದ ಕೃಷಿ ಪರಿಕರ ಮಾರಾಟಗಾರರ ಟಿ.ಪಿ ಸಂಖ್ಯೆ 1963 ಹಾಗೂ 1964 ಬ್ಯಾಚುಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸುಮಾರು 2.82 ಲಕ್ಷ ಕೃಷಿ-ಇನ್‌ಪುಟ್ ಡೀಲರ್‌ಗಳಿದ್ದಾರೆ. ಅವರು ರೈತ ಸಮುದಾಯಕ್ಕೆ ಕೃಷಿ ಮಾಹಿತಿಯ ಮೂಲವಾಗಿದ್ದಾರೆ. ಹೆಚ್ಚಿನ ರೈತರಿಗೆ ಮೊದಲ ಸಂಪರ್ಕ ಕೇಂದ್ರವೆಂದರೆ ಕೃಷಿ-ಇನ್‌ಪುಟ್ ಡೀಲರ್. ಕೃಷಿ ಕಾರ್ಯಾಚರಣೆಗೆ ಅಗತ್ಯವಿರುವ ವಿವಿಧ ಇನ್‌ಪುಟ್‌ಗಳನ್ನು ಖರೀದಿಸುವಾಗ ರೈತರು ಸ್ವಾಭಾವಿಕವಾಗಿ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಒಳಹರಿವಿನ ಬಳಕೆಯ ಬಗ್ಗೆ ಇನ್‌ಪುಟ್ ಡೀಲರ್‌ನಿಂದ ಮಾಹಿತಿ ಪಡೆಯಲು ಪ್ರಯತ್ನಿಸುತ್ತಾರೆ. ರೈತರಿಗೆ ನಿಮ್ಮ ಮೇಲೆ ನಂಬಿಕೆ ಇರುತ್ತದೆ. ಆದ್ದರಿಂದ ನೀವು ರೈತರು ಹಾಗೂ ಕೃಷಿ ಭೂಮಿಗೆ ಪೂರಕವಾಗಬಲ್ಲ ಸಲಹೆ, ಮಾಹಿತಿಗಳನ್ನು ರೈತರಿಗೆ ನೀಡಬೇಕು. ಈ ಕುರಿತು ತರಬೇತಿಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿರುತ್ತೀರಿ. ಅವುಗಳನ್ನು ಪ್ರಾಯೋಗಿಕವಾಗಿ ನಿಮ್ಮ ಅಂಗಡಿಗಳಲ್ಲಿ, ನಿಮ್ಮ ಬಳಿ ಬರುವ ರೈತರಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ರೈತರಿಗೆ ನೆರವಾಗಿ ಎಂದು ತಿಳಿಸಿದರು.ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರಿಗೆ ನೀಡಿರುವ ತರಬೇತಿಯು ಕ್ಷೇತ್ರಮಟ್ಟದಲ್ಲಿ ರೈತರೊಂದಿಗೆ ವ್ಯವಹರಿಸಲು, ರೈತರಿಗೆ ಸೂಕ್ತ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ. ಸರ್ಕಾರ ಹಾಗೂ ರೈತರ ನಡುವೆ ನೀವು ಸೇತುವೆಯಂತೆ ಕಾರ್ಯನಿರ್ವಹಿಸಿ ಸರ್ಕಾರದ ಕೃಷಿ ಯೋಜನೆ, ಸೌಲಭ್ಯಗಳು ರೈತರಿಗೆ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಜಿಲ್ಲೆಯಲ್ಲಿ 593 ಇನ್‌ಪುಟ್ ಡೀಲರ್‌ಗಳು ಪರವಾನಿಗೆ ಹೊಂದಿದ್ದು, ಈಗಾಗಲೇ 40 ಅಭ್ಯರ್ಥಿಗಳನ್ನು ಹೊಂದಿರುವ 8 ತರಬೇತಿಗಳನ್ನು ಆಯೋಜಿಸಿ 400 ಡೀಲರ್‌ಗಳಿಗೆ ತರಬೇತಿ ನೀಡಲಾಗಿದೆ. ಇಂದು 2 ಬ್ಯಾಚ್‌ಗಳ ತರಬೇತಿ ಪೂರ್ಣಗೊಂಡಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಮೂಲಕ ಈ ಬ್ಯಾಚ್‌ನ ತರಬೇತಿಯನ್ನು ಸಮಾರೋಪಗೊಳಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ತರಬೇತಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಹಾಗೂ ರಾಜ್ಯ ನೋಡಲ್ ಅಧಿಕಾರಿ ಡಾ. ಎಂ. ಗೋಪಾಲ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ, ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಎಂ.ವಿ. ರವಿ, ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ಕಮತರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಡಾ. ಚಂದ್ರಕಾಂತ ನಾಡ ಗೌಡ, ದೇಸಿ ಫೆಸಿಲಿಟೇಟರ್ ಜಂಬಣ್ಣ, ಗಂಗಾವತಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಸೇರಿದಂತೆ ತರಬೇತಾರ್ಥಿಗಳು, ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.