ಯಲ್ಲಾಪುರದಲ್ಲಿ ಕಸದ ರಾಶಿಯಲ್ಲಿ ಸ್ಫೋಟ: ವ್ಯಕ್ತಿಗೆ ಗಾಯ

| Published : Mar 15 2024, 01:15 AM IST

ಯಲ್ಲಾಪುರದಲ್ಲಿ ಕಸದ ರಾಶಿಯಲ್ಲಿ ಸ್ಫೋಟ: ವ್ಯಕ್ತಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು, ಹಿರಿಯರು, ಮಹಿಳೆಯರು ಸ್ಥಳದಿಂದ ದೂರದಲ್ಲಿದ್ದ ಕಾರಣ ಅದೃಷ್ಟವಶಾತ್ ಬೇರಾರಿಗೂ ಗಾಯಗಳಾಗಿಲ್ಲ.

ಯಲ್ಲಾಪುರ: ಕಸದ ರಾಶಿಗೆ ಬೆಂಕಿ ಹಾಕಿದಾಗ ಅದರಲ್ಲಿದ್ದ ಸುಗಂಧ ದ್ರವ್ಯದ ಬಾಟಲಿ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೋರ್ವರ ಕೈ, ಕಾಲು, ಕೆನ್ನೆಯ ಭಾಗ ಸುಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.

ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಟ್ಟಡದ ಹಿಂಭಾಗದಲ್ಲಿ ಬಿದ್ದಿದ್ದ ಕಸಕ್ಕೆ ಅಲ್ಲೇ ಪಕ್ಕದಲ್ಲಿದ್ದ ಮನೆ ಮಾಲೀಕ, ಬ್ಯಾಂಕ್ ಉದ್ಯೋಗಿ ಅಶೋಕ ಜಯರಾಮ ಪಾಟಣಕರ ಎನ್ನುವ ವ್ಯಕ್ತಿ ಬೆಂಕಿ ಹಾಕಿದಾಗ ಘಟನೆ ಸಂಭವಿಸಿದೆ. ಆಗ ಕಸದ ರಾಶಿಯಲ್ಲಿದ್ದ ಮೂಟೆಗಳು ಇದ್ದಕ್ಕಿದ್ದಂತೆ ದೊಡ್ಡದಾಗಿ ಸ್ಫೋಟಿಸಿದ್ದು, ಅಲ್ಲಿದ್ದ ಅಶೋಕ ಪಾಟಣಕರ ಅವರ ಬಲಗಾಲು, ಬಲಗೈ ಮತ್ತು ಬಲಭಾಗದ ಕೆನ್ನೆಗೆ ಸುಟ್ಟ ಗಾಯಗಳಾಗಿವೆ. ನಂತರ ಪಟ್ಟಣದ ತಾಲೂಕಾಸ್ಪತ್ರೆಗೆ ಸ್ನೇಹಿತರ ನೆರವಿನಿಂದ ತೆರಳಿದ ಅವರು ಚಿಕಿತ್ಸೆ ಪಡೆದರು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಘಟನೆಯ ಮಾಹಿತಿ ಪಡೆದರು. ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡ ಪೊಲೀಸರು ಕಸದ ರಾಶಿಯಲ್ಲಿ ಬಿದ್ದಿದ್ದ ಸುಗಂಧದ್ರವ್ಯದ ಬಾಟಲಿಗೆ ಬೆಂಕಿ ತಗುಲಿದ್ದರಿಂದ ಸ್ಫೋಟ ಸಂಭವಿಸಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಸ್ಫೋಟಗೊಂಡ ಸ್ಥಳ ಸರ್ಕಾರಿ ಇಲಾಖೆಯೊಂದರ ಸುಪರ್ದಿಗೆ ಸೇರಿದ್ದು, ಸಮರ್ಪಕ ನಿರ್ವಹಣೆ, ಜವಾಬ್ದಾರಿಯುತ ಹೊಣೆಗಾರಿಕೆಯೂ ಇಲ್ಲದೇ ಈ ಪ್ರದೇಶದ ತ್ಯಾಜ್ಯಗಳನ್ನು ತಂದು ಸುರಿಯುವ ಕಸದ ಅಡ್ಡೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಸರ್ಕಾರಿ ಜಾಗವೆಂಬ ಸ್ಥಳೀಯರ ತಾತ್ಸಾರವೋ ಎಂಬುದು ಜಿಜ್ಞಾಸೆಯ ಸಂಗತಿಯಾಗಿದೆ.

ಮಕ್ಕಳು, ಹಿರಿಯರು, ಮಹಿಳೆಯರು ಸ್ಥಳದಿಂದ ದೂರದಲ್ಲಿದ್ದ ಕಾರಣ ಅದೃಷ್ಟವಶಾತ್ ಬೇರಾರಿಗೂ ಗಾಯಗಳಾಗಿಲ್ಲ. ಈ ಪ್ರದೇಶದ ಸುತ್ತಮುತ್ತ ತ್ಯಾಜ್ಯ ತಂದು ಸುರಿಯದಂತೆ ಸಮರ್ಪಕ ತಡೆಗೋಡೆ ನಿರ್ಮಿಸಬೇಕಿದೆ ಎಂಬುದು ಸ್ಫೋಟದಿಂದ ಗಾಯಗೊಂಡ ಅಶೋಕ ಪಾಟಣಕರ ಅವರು ಆಗ್ರಹಿಸಿದ್ದಾರೆ.