ಅಣ್ಣಿಗೇರಿ:
ಮಹಾದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 6 ತಿಂಗಳ ಗಡುವು ನೀಡಲಾಗುತ್ತಿದೆ. ಯೋಜನೆ ಜಾರಿಗೆ ವಿಳಂಬ ಮಾಡಿದರೆ ನಾನು ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಅಂತೂರು-ಬೆಂತೂರಿನ ಬೂದೀಶ್ವರ ಸಂಸ್ಥಾನ ಮಠದ ರಾಚೂಟೇಶ್ವರ ಶಿವಾಚಾರ್ಯರು ಎಚ್ಚರಿಕೆ ನೀಡಿದರು.ಅವರು ಈಚೆಗೆ ಅಂತೂರು-ಬೆಂತೂರಿನಿಂದ ಉಳವಿಗೆ ಕೈಗೊಂಡಿರುವ ಪಾದಯಾತ್ರೆ ನಿಮಿತ್ತ ಮಜ್ಜಿಗುಡ್ಡ ಗ್ರಾಮಕ್ಕೆ ಆಗಮಿಸಿದ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಲೋಕ ಕಲ್ಯಾಣಾರ್ಥ ಹಾಗೂ ಮಹದಾಯಿ ಜಾರಿಗಾಗಿ 33 ದಿನ ಕಾಲ ಅನ್ನ-ನೀರಿಲ್ಲದೆ ಕಠಿಣವಾದ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನವನ್ನು ಯಶಸ್ವಿಗೊಳಿಸಲಾಗಿದೆ. ಈ ವೇಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಪಾದಯಾತ್ರೆ ಕೆಲ ದಿನಗಳ ಕಾಲ ವಿಳಂಬವಾಯಿತು. ತಡವಾದರೂ ಸಹ ಪಾದಯಾತ್ರೆ ಪ್ರಾರಂಭಿಸಿದ್ದು, ಉಳವಿ ಚನ್ನಬಸವೇಶ್ವರ ದರ್ಶನ ಪಡೆದು ಈ ನಾಡಿನ ಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ರಾಚೂಟೇಶ್ವರ ಶಿವಾಚಾರ್ಯರು ಅನುಷ್ಠಾನ ಮಾಡಿರುವುದು ಸಂತಸದ ಸಂಗತಿ. ಲೋಕಕಲ್ಯಾಣಕ್ಕಾಗಿ ನಡೆಯುತ್ತಿರುವ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಅಣ್ಣಿಗೇರಿ ದಾಸೋಹಮಠದ ಶಿವಕುಮಾರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಷಣ್ಮುಖ ಗುರಿಕಾರ, ಶ್ರೀಕುಮಾರ ದೇಸಾಯಿ, ದೇವರಾಜ ದಾಡಿಬಾಯಿ, ಅಣ್ಣಿಗೇರಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ವಿಎಸ್‌ಎಸ್ ಅಧ್ಯಕ್ಷ ನಿಜಗುಣಿ ಅಕ್ಕಿ, ಶಿವಶಂಕರ ಕಲ್ಲೂರ, ಪುರಸಭೆ ಸದಸ್ಯ ರೆಹಮಾನಸಾಬ್ ಹೊರಗಿನಮನಿ, ಮುಖಂಡರಾದ ಅಶೋಕ ಕೊಗ್ಗಿ, ಬಸಪ್ಪ ಕರ್ಲವಾಡ, ಚಾಂದುಸಾಬ ಹೂಲಿ ಸೇರಿ ಹಲವರಿದ್ದರು.