ಯಲಬುರ್ಗಾ: ಲಿಂಗಾಯತರಿಗೆ ಯಾವ ಸೂತಕಗಳಿಲ್ಲ.ಲಿಂಗದೀಕ್ಷೆ ಆದ ನಂತರ ಐದು ವಚನ ಓದಬೇಕು.ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಗುಳೆ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಐದು ದಿನಗಳ ಕಾಲ ಹಮ್ಮಿಕೊಂಡಿದ್ದ ಬಸವ ದರ್ಶನ ಪ್ರವಚನ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಜ್ಞಾನ ದೀಕ್ಷೆ ಎಂದರೆ ಅಧ್ಯಾತ್ಮಿಕ ಜ್ಞಾನದ ಉಪದೇಶವಾಗಿದೆ.ಇದು ಶಿಷ್ಯನ ಅಜ್ಞಾನ ಹೋಗಲಾಡಿಸಿ ಆತ್ಮಸಾಕ್ಷಾತ್ಕಾರದ ಕಡೆಗೆ ಕೊಂಡೊಯ್ಯುವ ಉನ್ನತ ಪ್ರಕ್ರಿಯೆಯಾಗಿದೆ. ಗುರುವು ಮಂತ್ರ ಅಥವಾ ಜ್ಞಾನ ಶಿಷ್ಯನಿಗೆ ನೀಡುವ ಮೂಲಕ ಆಂತರಿಕ ಶಕ್ತಿ ಜಾಗೃತಗೊಳಿಸುವ ಪ್ರಕ್ರಿಯೆಯಾಗಿದೆ.
ಏಕದೇವೋಪಾಸನೆಯು ಅನೇಕ ದೇವತೆಗಳ ಬದಲಿಗೆ ಒಬ್ಬನೇ ಬಸವೇಶ್ವರವರನ್ನು ಶ್ರದ್ಧೆಯಿಂದ ಆರಾಧಿಸುವ ಆಧ್ಯಾತ್ಮಿಕ ಮಾರ್ಗವಾಗಿದೆ.ಇದು ಮನಸ್ಸಿನ ಏಕಾಗ್ರತೆ,ನಂಬಿಕೆ ಮತ್ತು ಜೀವನದಲ್ಲಿ ಸಾರ್ಥಕತೆ ತರುತ್ತದೆ.ವೈಯಕ್ತಿಕ ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಶರಣರ ತತ್ವಗಳಲ್ಲಿ ಮೂಢನಂಬಿಕೆ ತೊರೆದು ಸತ್ಯ ಮತ್ತು ಸರಳ ಜೀವನ ನಡೆಸಲು ಒತ್ತು ನೀಡುತ್ತದೆ ಎಂದರು.ಕ್ರಿಯಾ ದೀಕ್ಷೆಯು ಅಧಿಕೃತ ಗುರುಗಳಿಂದ ಕ್ರಿಯಾ ಯೋಗದ ತಂತ್ರಗಳನ್ನು ಕಲಿಯುವ ಮತ್ತು ಆಧ್ಯಾತ್ಮಿಕವಾಗಿ ಅನ್ವೇಷಿಸುವುದಾಗಿದೆ. ಶಿಷ್ಯನಿಗೆ ಪರಮಾತ್ಮನ ಅರಿವು,ಆಂತರಿಕ ಶಾಂತಿ,ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಬಡವರು ದುಂದುವೆಚ್ಚ ಮಾಡುವ ಮೂಲಕ ಮದುವೆಯಾದರೆ ಸಾಲಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು.ಆದ್ದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಸಾಮೂಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ನಾಗರಾಳದ ಬಸವರಾಜ ಮತ್ತು ಪಾರ್ವತಿ ನವ ದಂಪತಿಗಳು ಶರಣರ ವಚನಗಳಂತೆ ಪ್ರತಿಜ್ಞಾ ವಿಧಿ ಬೋಧಿಸಿ ಕಲ್ಯಾಣ ಕಾರ್ಯಕ್ರಮ ನೆರವೇರಿಸಿದರು. ಕುಷ್ಟಗಿಯ ಹುಲಿಗೆಮ್ಮ ರಾಮಣ್ಣ ಭಜಂತ್ರಿ ಕಲ್ಯಾಣ ಮಹೋತ್ಸವಕ್ಕೆ ಮಾಂಗಲ್ಯ ಸೇವೆ ಹಾಗೂ ನಿಂಗಪ್ಪ ಮನ್ನೆರಾಳ ವಧುವರರಿಗೆ ವಸ್ತ್ರ ವಿತರಣೆ ಸೇವೆ ಸಲ್ಲಿಸಿದರು. ಕಲ್ಯಾಣ ಮಹೋತ್ಸವಕ್ಕೂ ಮೊದಲು ಅನುಭವ ಮಂಟಪದಲ್ಲಿ ನೂರಾರು ಮಹಿಳೆಯರು ಸಾಮೂಹಿಕ ಲಿಂಗ ಪೂಜೆ ಸಲ್ಲಿಸಿದರು.
ಈ ಸಂದರ್ಭ ರಾಷ್ಟ್ರೀಯ ಬಸವದಳ ಗ್ರಾಮ ಘಟಕದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ನಿವೃತ್ತ ಪಿಎಸ್ಐ ಬಸನಗೌಡ ಕನಸಾವಿ, ಬಸವರಾಜ ಹೂಗಾರ, ಕೆ.ಪಂಪಣ್ಣ,ಅಮರೆಶಪ್ಪ ಬಳ್ಳಾರಿ, ಅಮರೇಶ ಗಡಿಹಳ್ಳಿ, ಸಂಗಣ್ಣ ತೆಂಗಿನಕಾಯಿ, ಅಮರಪ್ಪ ಕಲಬುರ್ಗಿ, ನಿಜಲಿಂಗಪ್ಪ ಮೇಣಸಗಿ, ಕೊಟ್ರಪ್ಪ ಸೇಡದ, ರಾಜಶೇಖರ ವೈಜಾಪೂರ, ತಿಪ್ಪಣ್ಣ ಗುಗ್ಗರಿ, ಪತ್ರೆಪ್ಪ ಕಬ್ಬಿಣದ, ರುದ್ರಪ್ಪ ಹಳ್ಳಿ, ಪಾಲಾಕ್ಷಪ್ಪ ಹುಣಶಿಹಾಳ, ಬಸವಣ್ಣ ದೇವಲ, ದೇವಪ್ಪ ಕೋಳೂರು, ಎಸ್.ಕೆ.ದಾನಕೈ, ನಾಗನಗೌಡ ಜಾಲಿಹಾಳ ಸೇರಿದಂತೆ ಮತ್ತಿತರರು ಇದ್ದರು.