ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ನಿಮಿತ್ತ ಫೆ.1 ರಂದು ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲಿ ಮಾತನಾಡಿ, ರಾಜ್ಯದಲ್ಲಿ ಕ್ರೀಡೆ, ಸಾಂಸ್ಕೃತಿಕ, ಜಾನಪದ ಉಳಿಸಿ ಬೆಳೆಸಬೇಕಾದರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಯುವ ನೀತಿ, ಸಾಂಸ್ಕೃತಿಕ ನೀತಿ ಜಾರಿಗೊಳಿಸಬೇಕು. ಹಲವು ವರ್ಷಗಳಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ಸಂಘಗಳ ಒಕ್ಕೂಟದಿಂದಲೇ ರಾಜ್ಯದ 31 ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸರ್ಕಾರದಿಂದಲೇ ಯುವ ಪ್ರಶಸ್ತಿ ನೀಡಬೇಕು ಎಂದು ಸರ್ಕಾರಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ರಾಜ್ಯದ ಸಾವಿರಾರು ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂದರು.ಪ್ರತಿ ವರ್ಷ ರಾಜ್ಯದ 31 ಜಿಲ್ಲೆಗಳ ತಲಾ ಒಬ್ಬ ಸಾಧಕರಿಗೆ, ತಲಾ 2 ಸಾಂಘಿಕ, ಹೊರರಾಜ್ಯದ ಸಾಧಕರಿಗೆ ಮತ್ತು 6 ಸ್ಥಳೀಯವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸಂಘಟನೆಗಳನ್ನು ನಿರ್ಲಕ್ಷಿಸಿದ ಬಗ್ಗೆ ರಾಜ್ಯ ಯುವ ನೀತಿಯ ವರದಿಯಲ್ಲಿ ಉಲ್ಲೇಖಿಸಿದ್ದರೂ ಅದನ್ನಿನ್ನೂ ಅಳವಡಿಸಿಕೊಂಡಿಲ್ಲ. ಗ್ರಾಮೀಣ ಯುವ ಸಂಘಗಳಿಗೆ ಹೆಚ್ಚಿನ ಮಾನ್ಯತೆ ನೀಡುವಂತೆ ಕೇಳಿದ್ದರೂ ಕಾಲೇಜು ವಿದ್ಯಾರ್ಥಿ ಕೇಂದ್ರೀಕೃತ ಚಟುವಟಿಕೆ ನಡೆಸಿ ವಿದ್ಯಾರ್ಥಿಯೇತರ ಯುವಜನತೆಯನ್ನು ಕಡೆಗಣಿಸತೊಡಗಿದೆ. ಇದರಿಂದಾಗಿ ನೆಹರು ಯುವ ಕೇಂದ್ರ ಮುಚ್ಚುವ ಸ್ಥಿತಿ ಬಂದಿದೆ. ಇದಕ್ಕೆ ಈ ವರ್ಷ ಅನುದಾನವನ್ನೇ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಯುವಜನ ಸಮ್ಮೇಳನ ಮಾಡುತ್ತಿದ್ದೇವೆ. ಯುವಜನ ಮೇಳಗಳನ್ನು ಒಕ್ಕೂಟದಿಂದಲೇ ನಡೆಸಲು ತೀರ್ಮಾನಿಸಿದ್ದೇವೆ. ಒಕ್ಕೂಟವು ಸಾರ್ವಜನಿಕ ಸಂಘ-ಸಂಸ್ಥೆಗಳೊಂದಿಗೆ ಸೇರಿ ಯುವ ಜನತೆಯನ್ನು ಬಳಕೆ ಮಾಡುವ ಕುರಿತು ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ತರಬೇತಿ ಆಯೋಜಿಸಲು ತೀರ್ಮಾನಿಸಿದೆ. ಸರ್ಕಾರ ಕೊಡಬೇಕಾದ ರಾಜ್ಯ, ಜಿಲ್ಲಾ ಯುವ ಪ್ರಶಸ್ತಿಯನ್ನು ಒಕ್ಕೂಟದಿಂದ ಕೊಡುತ್ತಿದ್ದೇವೆ. ಜಿಲ್ಲೆ, ರಾಜ್ಯ ಮಟ್ಟದಲ್ಲಿ, ಅಂತರ್‌ರಾಜ್ಯ ಮಟ್ಟದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಮಾತನಾಡಿದರು. ಈ ವೇಳೆ ಯುವ ಸಂಘಗಳ ಒಕ್ಕೂಟದ ತಾಲೂಕ ಅಧ್ಯಕ್ಷರನ್ನಾಗಿ ವಿರೇಶ ಗುರುಮಠ, ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜುಗೌಡ ತುಂಬಗಿ, ಖಜಾಂಚಿಯಾಗಿ ಶ್ರೀಕಾಂತ ಹಿರೇಮಠ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ದೀಪಾ ರತ್ನಶ್ರೀಯನ್ನು ಆಯ್ಕೆ ಮಾಡಲಾಯಿತು.ಈ ವೇಳೆ ದಾನಯ್ಯ ಹಿರೇಮಠ, ಚಂದ್ರು ಕಲಾಲ, ಚಂದ್ರು ಕರೇಕಲ್ಲ, ಪ್ರಶಾಂತ ಕಾಳೆ, ರುದ್ರೇಶ ಮುರಾಳ, ಸಾಬಣ್ಣ ಶಳ್ಳಗಿ, ಮಹಾಂತೇಶ ಬೂದಿಹಾಳಮಠ, ಮಹ್ಮದ ರಫೀಕ್ ಶಿರೋಳ, ರಾಜು ವಾಲಿಕಾರ,ಕೃಷ್ಣ ಕುಂಬಾರ ಸೇರಿದಂತೆ ಹಲವರು ಇದ್ದರು.